☀
                                                ಮಾರ್ಕಂಡೇಯ ಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವೀ ಮಹಾತ್ಮ್ಯೆಯ ಸ್ತುತಿ ಶ್ಲೋಕವೊಂದನ್ನು ಭಕ್ತರೆಲ್ಲರೂ ಸೇರಿ ಕೋಟಿ ಕೋಟಿ ಸಂಖ್ಯೆಗಳಲ್ಲಿ  ಜಪಿಸುವುದು ಎಂದು ಕಟೀಲು ದುರ್ಗಾಪರಮೇಶ್ವರೀ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಸಂಕಲ್ಪ ಡಿಸೆಂಬರ್ 15 ರಂದು  ಕೋಟಿ ಜಪಯಜ್ಞಕ್ಕೆ ಸಂಕಲ್ಪ ದೀಕ್ಷೆ ಮಾಡಲಾಗಿದ್ದು ದ.ಕ. ಉಡುಪಿ ಜಿಲ್ಲೆಗಳು ಕಾಸರಗೋಡು ಸಹಿತ ಮುಂಬಯಿ ಬೆಂಗಳೂರು ಚೆನ್ನೈನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನರು ಹೆಸರು ನೋಂದಾಯಿಸಿದ್ದು ಅದರ ಕೋಟಿಜಪಯಜ್ಞಪೂರ್ಣಾಹುತಿ ಭಾನುವಾರ ಕಟೀಲಿನ ಭ್ರಾಮರೀ ವನದಲ್ಲಿ ನಡೆಯಿತು. ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ  ಭಕ್ತರು ದೇವಳಕ್ಕೆ ಆಗಮಿಸಿ ಕೋಟಿ ಜಪದಲ್ಲಿ ಭಾಗಿಯಾದರು. ಕೋಟಿ ಜಪಯಜ್ಞದ ನೋಂದಾವಣೆಗೆ ಸುಮಾರು 8 ಕಡೆಗಳಲ್ಲಿ ಕೌಂಟರ್ ತೆರೆಯಲಾಗಿತ್ತು. ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆಯ ತನಕ ಕೋಟಿ ಜಪಕ್ಕೆ ಅವಕಾಶ ನೀಡಲಾಗಿತ್ತು.
                                            
                                            
                                                ☀
                                                ಭ್ರಾಮರೀವನದಲ್ಲಿ ಕುಂಕುಮ ಹಿಡಿದ ವೃತಧಾರಿಗಳು ನೂರೆಂಟು ಸಲ ಸರ್ವಮಂಗಲ ಮಾಂಗಲ್ಯೇ ಶ್ಲೋಕವನ್ನು ಪಠಿಸಿ, ಕಳೆದ ನಲವತ್ತೆಂಟು, ಹನ್ನೆರಡು ಹೀಗೆ ಅನೇಕ ದಿನಗಳಿಂದ ವೃತಧಾರಿಗಳಾಗಿ ಹೇಳುತ್ತಿದ್ದ ಮಂತ್ರದೀಕ್ಷೆಗೆ ಬ್ರಹ್ಮಾರ್ಪಣ ಬಿಟ್ಟು, ಪ್ರಸಾದ ಸ್ವೀಕರಿಸಿದರು.
                                            
                                            
                                                ☀
                                                ಅನೇಕರು ಮಂಗಳೂರು ಮೂಡುಬಿದ್ರೆ ಮುಂತಾದ ಕಡೆಗಳಿಂದ ಪಾದಯಾತ್ರೆಯಲ್ಲಿ ಬಂದಿದ್ದರು. ಕಳೆದೆರಡು ದಿನಗಳಿಂದ ನಡೆದ ಬ್ರಹ್ಮಕಲಶಾಭಿಷೇಕ, ನಾಗಮಂಡಲಕ್ಕೆ ಆಗಮಿಸಿದ ಭಕ್ತರನ್ನೂ ಮೀರಿಸಿದ ಸಂಖ್ಯೆಯಲ್ಲಿ ಭಾನುವಾರ ಕಟೀಲಿಗೆ ಆಗಮಿಸಿದ್ದು, ಮಧ್ಯಾಹ್ನದ ಅನ್ನಪ್ರಸಾದವನ್ನೂ ಒಂದು ಲಕ್ಷದಷ್ಟು ಮಂದಿ ಸ್ವೀಕರಿಸಿದ್ದರು.
                                            
                                            
                                                ☀
                                                ದೇವಳದಲ್ಲಿ ಬೆಳಿಗ್ಗೆ ತ್ರಿಕಾಲ ಪೂಜೆ, ಭ್ರಾಮರೀ ವನದಲ್ಲಿ ಬೆಳಿಗ್ಗೆನಿಂದ  ಸುಮಾರು 80ರಷ್ಟು ಋತ್ವಿಜರಿಂದ ನವಾಕ್ಷರಿಯಾಗ, ಸಹಸ್ರನಾರೀಕೇಳ ಗಣಯಾಗ, ಸಹಸ್ರಚಂಡಿಕಾ ಸಪ್ತಸತೀಪಾರಾಯಣ, ಕುಮಾರಿ ಪೂಜೆ, ಸಹಸ್ರಚಂಡಿಕಾಯಾಗ ಅಗ್ನಿಜನನ, ಕೋಟಿ ಜಪಯಾಜ್ಞ ಪರಿಸಮಾಪ್ತಿ ನಡೆಯಿತು. ಶುಕ್ರವಾರ, ಶನಿವಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರಿದ್ದು, ಸರತಿ ಸಾಲುಗಳನ್ನು ನಿಯಂತ್ರಿಸುತ್ತಿದ್ದರು. ಆದರೆ ಭಾನುವಾರ ಸ್ವಯಂಸೇವಕರ ಸಂಖ್ಯೆ ಕಡಿಮೆಯಿದ್ದರೂ, ಎರಡು ದಿನಗಳ ಸಂಖ್ಯೆಯನ್ನು ಮೀರಿಸಿದ ಭಕ್ತರು ಕ್ಷೇತ್ರಕ್ಕಾಗಮಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ, ಶಿಸ್ತುಬದ್ಧವಾಗಿ ಭಕ್ತಿಯ ದರ್ಶನಕ್ಕೆ ಕಟೀಲು ಕ್ಷೇತ್ರ ಸಾಕ್ಷಿಯಾದುದು ಕ್ಷೇತ್ರದ ಸಾನ್ನಿಧ್ಯದ ಚಿತ್ತವೆಂದು ಬಣ್ಣಿಸಲಾಗಿದೆ.