ದೇವಸ್ಥಾನದ ಸ್ಥಳ ಪುರಾಣದ ವಿವರ
ವೈವಸ್ವತ ಮನ್ವಂತರದ ಚತಯುರ್ಗದ ಇಪ್ಪಂತೆಂಟನೆಯ ಪರ್ಯಾಯದ ಕಲಿಯುಗದ ಪ್ರಥಮ ಪಾದ.
ಹೊಳೆ ತೊರೆ ಕೆರೆ ಬಾವಿಗಳ ಜಲ ಸಮೃದ್ಧಿಯಿಂದ ಹೂ ಗಿಡ ಬಳ್ಳಿ ಮರಗಳ ವನ ಸಮೃದ್ಧಿಯಿಂದ ನಳ
ನಳಿಸಬೇಕಾದ ಭೂಮಿ ಭೀಕರ ಬರಗಾಲದಿಂದ ಭಣಗುಟ್ಟುತ್ತಿದೆ. ಕುಡಿಯಲು ನೀರಿಲ್ಲದೆ ತಿನ್ನಲು
ಆಹಾರವಿಲ್ಲದೆ ಪಶು ಪಕ್ಷಿ ಮೃಗಗಳೂ ಮನುಷ್ಯನೂ ಹಸಿವೆಯಿಂದ ಕಂಗಾಲಾಗಿದ್ದಾರೆ.
ಎಲ್ಲೆಂದರಲ್ಲಿಹಸಿವೆಯೇ ಹೇತುವಾಗಿ ಸತ್ತ ಹೆಣಗಳ ಬಣವೆಯಿಂದ ಕರುಳೊಣಗಿದ ಜೀವಿಗಳ
ಆರ್ತನಾದದಿಂದ ಇಡಿಯ ಪೃಥ್ವಿಯೇ ತತ್ತರಿಸುತ್ತಿದೆ.
ನಿರ್ಜರಾರಣ್ಯದಲ್ಲಿರುವ ಆಮಲಕತೀರ್ಥ (ನೆಲ್ಲಿತೀರ್ಥ) ದ ಗುಹೆಯಲ್ಲಿ
ಧ್ಯಾನಮಗ್ನನಾಗಿದ್ದ ಜಾಬಾಲಿ ಮಹರ್ಷಿಗೆ ದೈವೇಚ್ಛೆಯಿಂದ ಇದ್ದಕ್ಕಿದ್ದಂತೆ
ಎಚ್ಚರವಾಯಿತು. ಅಂತರಂಗದಿಂದ ಬಹಿರಂಗಕ್ಕೆ ಬಂದ ಮಹರ್ಷಿ ಹಸಿವು ನೀರಡಿಕೆಗಳಿಂದ
ಸಾಯುತ್ತಿರುವವರ ಸಂಕಟವನ್ನು ಲೋಕಕ್ಕೆ ಬಂದ ಬರಗಾಲವನ್ನು ಯಜ್ಞದ ಮೂಲಕ
ನಿವಾರಿಸುತ್ತೇನೆಂದು ಸಂಕಲ್ಪಿಸಿದ.
ಆದರೆ ನೀರಿಗೆ ಬರವಿರುವ ಭೂಮಿಯಲ್ಲಿ ಬಹುದ್ರವ್ಯ ಸಾಧ್ಯವಾದ ಯಜ್ಞವನ್ನು
ಮಾಡುವುದಾದರೂ ಹೇಗೆ? ಯಜ್ಞಕ್ಕೆ ಬೇಕಾದ ಸಂಭಾರಗಳನ್ನು ಸಂಗ್ರಹಿಸುವುದು ಹೇಗೆ? ಒಂದು
ಕ್ಷಣಕಾಲ ಚಿಂತಿಸಿದ ಜಾಬಾಲಿ ಮುನಿ ಯೋಗ ಬಲದಿಂದ ತೇಜ: ಶರೀರಿಯಾಗಿ ಸ್ವರ್ಗಲೋಕಕ್ಕೆ
ತೆರಳಿದ. ನೂರು ಯಾಗಗಳನ್ನು ಆಚರಿಸಿ ಸ್ವರ್ಗದ ಅಧಿಪತ್ಯವನ್ನು ಸಂಪಾದಿಸಿದ ಪುರಂದರನಲ್ಲಿ
ಮರ್ತ್ಯರ ಸಂಕಟವನ್ನು ತಿಳುಹಿಸಿ“ಕ್ಷಾಮ ನಿವೃತ್ತಿಗಾಗಿ ಲೋಕ ಕ್ಷೇಮಕ್ಕಾಗಿ ಯಜ್ಞ
ಮಾಡುವ ಸಂಕಲ್ಪ ಮಾಡಿದ್ದೇನೆ. ಹೋಮಧೇನುವಾಗಿ ಕಾಮಧೇನುವನ್ನು ಕಳುಹಿಸಿಕೊಡಬೇಕೆಂದು”
ಪ್ರಾರ್ಥಿಸಿದ.
“ಮುನಿಗಳೇ! ಕಾಮಧೇನು ಯಜ್ಞ ನಿಮಿತ್ತ ವರುಣ ಲೋಕಕ್ಕೆ ತೆರಳಿದ್ದಾಳೆ. ಹಾಗಾಗಿ
ಅವಳನ್ನು ತಮ್ಮೊಡನೆ ಕಳುಹಿಸುವಂತಿಲ್ಲ. ಆದರೆ ಆಕೆಯಷ್ಟೇ ಮಹಾತ್ಮ್ಯವುಳ್ಳ ಕಾಮಧೇನುವಿನ
ಮಗಳಾದ ನಂದಿನಿ ಇದ್ದಾಳೆ. ಆಕೆಯೊಪ್ಪಿದರೆ ತಾವು ಕರೆದುಕೊಂಡು ಹೋಗಿ ಯಜ್ಞವನ್ನು
ನೆರವೇರಿಸಿ” ಎಂದು ದೇವೇಂದ್ರ ತನ್ನ ಒಪ್ಪಿಗೆಯನ್ನು ಕೊಟ್ಟ.
ಸಂತಸದಿಂದ ದೇವರಾಜನನ್ನು ಬೀಳ್ಕೊಟ್ಟ ಜಾಬಾಲಿಮುನಿ ನಂದಿನಿ ಇದ್ದಡೆಗೆ ಬಂದು ಕೈ
ಮುಗಿದು ನಿಂದು “ತಾಯೇ ಭೂಲೋಕ ಬರಗಾಲದಿಂದ ಬೆಂದು ಹೋಗಿದೆ. ಹಸಿವೆಯಿಂದ ಕಂಗೆಟ್ಟ ಮಂದಿ
ನರಿನಾಯಿಗಳ ಮಾಂಸವನ್ನು ಕಿತ್ತು ತಿನ್ನುತ್ತಿದ್ದಾರೆ. ಬಾಯಾರಿಕೆಯಿಂದ ಬಳಲಿ ತಮ್ಮ
ಕಂಬನಿಯನ್ನೇ ಕುಡಿಯುತ್ತಿದ್ದಾರೆ. ಮಳೆಯಾಗದೇ ಬೆಳೆ ಬರದು ಬೆಳೆಯಿಲ್ಲದೆ ಬಾಳಿಲ್ಲ.
ಯಜ್ಞದಲ್ಲಿ ಮಂತ್ರಪೂತವಾದ ಆಹುತಿನೀಡುವುದರಿಂದ ಸಂತುಷ್ಟರಾದ ದೇವತೆಗಳು ಲೋಕಕ್ಕೆ
ಸುವೃಷ್ಟಿಯನ್ನುಂಟು ಮಾಡುತ್ತಾರೆಂಬುದು ಶಾಸ್ತ್ರ ವಚನ. ಹಾಗಾಗಿ ಕ್ಷಾಮ ನಿವೃತ್ತಿಗಾಗಿ
ಲೋಕ ಕ್ಷೇಮಕ್ಕಾಗಿ ಭೂಲೋಕದಲ್ಲಿ ನಾನೊಂದು ಯಜ್ಞ ಮಾಡಲು ಸಂಕಲ್ಪಿಸಿದ್ದೇನೆ. ಆದರೆ ಬರ
ಬಿದ್ದ ಭೂಮಿಯಲ್ಲಿ ಯಜ್ಞಕ್ಕೆ ಬೇಕಾದ ದ್ರವ್ಯ ಸಾಮಾಗ್ರಿಗಳು ಸಿಗುವುದಿಲ್ಲ. ಅದಕ್ಕಾಗಿ
ಕೇಳಿದ್ದನ್ನು ಕರುಣಿಸಿ ಕೊಡುವ ಸಾಮರ್ಥ್ಯವಿರುವ ಕಾಮಧೇನು ಪುತ್ರಿಯಾದ
ನೀನುಹವಿರ್ದ್ರವ್ಯಗಳನ್ನು ಅನುಗ್ರಹಿಸುವರೇ ನನ್ನೊಡನೆ ಭೂಲೋಕಕ್ಕೆ ದಯಮಾಡಿಸಬೇಕು ತಾಯಿ”
ಎಂದು ವಿನೀತನಾಗಿ ಪ್ರಾರ್ಥಿಸಿದ
ಕಾಮಿಸಿದ್ದನ್ನು ಕೊಡುವ ಮಹಿಮೆಯನ್ನು ಹುಟ್ಟಿನಿಂದಲೇ ಹೊಂದಿದ್ದ ನಂದಿನಿಯ ಮೈಯ ನರ
ನರದಲ್ಲಿ ಮದ ತುಂಬಿ ಹರಿಯುತ್ತಿತ್ತು. ತಾನು ಸರ್ವಶ್ರೇಷ್ಠಳೆಂಬ ಸೊಕ್ಕು ಉಕ್ಕಿ
ಚೆಲ್ಲುತ್ತಿತ್ತು. ಸುರರ ಸಂಪರ್ಕದ ಹಮ್ಮಿನಿಂದ ಅವಳ ಕಣ್ಣು ಕುರುಡಾಗಿತ್ತು. ಕಾರುಣ್ಯ
ಬತ್ತಿ ಕರುಳು ಒಣಗಿ ಹೋಗಿತ್ತು. ಕರೆದಾತ ಮಹಾಮಹಿಮನಾದ ಮಹರ್ಷಿ ಎಂಬುದನ್ನು ಮರೆತು
“ಕೀಚಕ, ರಾವಣ, ಕಾರ್ತವೀರ್ಯ, ಕೌರವ ಮುಂತಾದಭ್ರಷ್ಟರಿಗೆ ಜನ್ಮವಿತ್ತ ಪಾತಕಿಗಳ ನಾಡಾದ,
ಅಧರ್ಮದ ಬೀಡಾದ, ಅನ್ಯಾಯದ ಗೂಡಾದ ಭೂಲೋಕಕ್ಕೆ ನಾನು ಖಂಡಿತಾ ಬರಲಾರೆನೆಂದು ಒಂದೇ
ಉಸುರಿಗೆ ಮಹರ್ಷಿಯ ಪ್ರಾರ್ಥನೆಯನ್ನು ನಂದಿನಿ ತಿರಸ್ಕರಿಸಿಬಿಟ್ಟಳು. ನಂದಿನಿಯ ಮಾತು
ಕೇಳಿ ಮುನಿಯ ಮನ ನೊಂದಿತು. ಶ್ರೀಮನ್ನಾರಾಯಣನ ಅವತಾರ ಭೂಮಿಯಾದ, ದಿವ್ಯ ಭೂಮಿಯಾದ,
ದಿವ್ಯ ಪುರುಷರ ಲೀಲಾ ಭೂಮಿಯಾದ, ಮಹಾಪುರುಷರ ಸಂಚರಣಭೂಮಿಯಾದ, ನಿಖಿಲ ಸೃಷ್ಟಿಯಲ್ಲೇ
ಪುಣ್ಯ ಭೂಮಿಯಾದ ಮರ್ತ್ಯ ಲೋಕವನ್ನೀಕೆ ಹೀಗಳೆದು ಬಿಟ್ಟಳಲ್ಲ! ತಾಯ್ನಾಡ ನಿಂದೆಯನ್ನು
ಕೇಳುವ ದೌರ್ಭಾಗ್ಯ ನನ್ನದಾಯಿತಲ್ಲ! ಮುನ್ನುಗ್ಗಿ ಬರುವ ದು:ಖವನ್ನೂ, ಕ್ರೋಧವನ್ನೂ
ಕಷ್ಟದಿಂದ ತಡೆಹಿಡಿದು ಸಂಯಮವನ್ನು ಕಳೆದುಕೊಳ್ಳದೇ ಮತ್ತೊಮ್ಮೆ ವಿನೀತನಾಗಿ
ಪ್ರಾರ್ಥಿಸಿದ.
ಅಮ್ಮಾ ಕೆರೆಯಿದ್ದಲ್ಲಿ ಕೆಸರು. ಊರಿದ್ದಲ್ಲಿ ಹೊಲಗೇರಿ. ಮನುಜರಿದ್ದಲ್ಲಿ ಮಾಲಿನ್ಯ
ಇರುವಂತಹುದೇ. ತಪ್ಪು ಮರ್ತ್ಯರಲ್ಲಷ್ಟೇ ಇರುವುದಲ್ಲ ಲೋಕವಂದ್ಯರಾದ ದೇವತೆಗಳಲ್ಲೂ
ಇರುತ್ತದೆ. ದೇವತೆಗಳು ಮಾಡದ ಯಾವ ತಪ್ಪನ್ನೂ ಮರ್ತ್ಯರು ಮಾಡಿದ್ದಿಲ್ಲ. ಅಹಲ್ಯೆಯ ಮೇಲೆ
ಆಸೆ ಇಟ್ಟುಕೊಂಡಿದ್ದ ದೇವೇಂದ್ರ ಗೌತಮರ ಶಾಪಕ್ಕೆ ತುತ್ತಾಗಿ ಮೈಗಣ್ಣನಾಗಲಿಲ್ಲವೇ?
ರಾವಣಾದಿಗಳು ಜನ್ಮವೆತ್ತಿದ ಭೂಮಿಯಲ್ಲೇರಾಮಾದಿಗಳು ಹುಟ್ಟಿ ಬರಲಿಲ್ಲವೇ? ಅನ್ನ
ನೀರಿಲ್ಲದೆ ಸಂಕಟದಿಂದ ಸಾಯುತ್ತಿರುವ ಅಶಕ್ತ ಮಾನವರ ಬಗೆಗೆ ನೀನಿಷ್ಟು ಕ್ರೂರಿಯಾಗಬೇಡ.
ನನ್ನೊಡನೆ ಭೂಮಿಗೆ ಬಂದು ಯಜ್ಞಾನುಕೂಲಳಾಗು. ಮರ್ತ್ಯರ ಬಗೆಗೆ ಪ್ರಸನ್ನಳಾಗು.
ಜಾಬಾಲಿ ಎಷ್ಟು ಬೇಡಿಕೊಂಡರೂ ನಂದಿನಿಯ ಮನ ಕರಗಲಿಲ್ಲ. ಆಕೆ ಕಡ್ಡಿ ಮುರಿದಂತೆ
ಕಟುವಾಗಿ ಹೇಳಿದಳು ‘ಮಹರ್ಷೇ ವೃಥಾ ತಾವು ಆಗ್ರಹಿಸಬೇಡಿ. ಸಾಕ್ಷಾತ್ ಪರಮೇಶ್ವರನೇ ಬರ
ಹೇಳಿದರೂ ನಾನು ಪಾಪಿಗಳ ತವರೂರಾದ ನಿಮ್ಮ ಭೂಲೋಕಕ್ಕೆ ಖಂಡಿತಾ ಬರಲಾರೆ. ಅವರ ಪಾಪದ
ಫಲವನ್ನು ಅವರು ಅನುಭವಿಸಲಿ.
ಜಿತೇಂದ್ರಿಯನಾದ ಜಾಬಾಲಿಯ ಸೈರಣೆ ತಪ್ಪಿತು. ಕುಸುಮಕೋಮಲವಾದ ಮನಸ್ಸು
ಕಗ್ಗಲ್ಲಿಗಿಂತಲೂ ಕಠಿಣವಾಯಿತು. ನಖಶಿಖಾಂತ ಕೋಪಾಗ್ನಿಯಿಂದ ಕಾದು ಕೆಂಡವಾದ ಮಹರ್ಷಿಯ
ಮೊಗದಿಂದ ಶಾಪದ ನುಡಿ ಸಿಡಿಯಿತು. – “ಗಂಗಾದಿ ಪಣ್ಯ ನದಿಗಳು ಹರಿಯುತ್ತಿರುವ ಯಾವ ಪಾವನ
ಭೂಮಿಯನ್ನು ಹಳಿದಿಯೋ ಅದೇ ಭೂಮಿಯಲ್ಲಿ ನೀನು ಹೊಳೆಯಾಗಿ ಬಾ”.
ಸಿಡಿಲೆರಗಿದ ಮರದಂತೆ ಮಿಂಚು ಹೊಡೆದ ಬಳ್ಳಿಯಂತೆ ಕತ್ತರಿಸಿದ ಬಾಳೆ ಗಿಡದಂತೆ
ನಂದಿನಿಯು ಜಾಬಾಲಿಮುನಿಯ ಪದತಲದಲ್ಲಿ ಕುಸಿದು ಬಿದ್ದಳು. ಪಶ್ಚಾತ್ತಾಪದಿಂದುಗಿದ ಕಂಬನಿಯ
ಕೋಡಿಯಿಂದ ಆತನ ಕಾಲನ್ನು ತೊಳೆದಳು. “ತಂದೆಯೇ ಅಜ್ಞಾನ ಹಾಗೂ ಅಹಂಕಾರಗಳಿಂದ ಗೈದ
ಅಪರಾಧವನ್ನು ಮನ್ನಿಸಿ ವಿಶಾಪವನ್ನಿತ್ತು ಅನುಗ್ರಹಿಸಿ” ಎಂದು ಬೇಡಿಕೊಂಡಳು. ತನ್ನ
ಆಶ್ರಮದ ವಟುಗಳಿಗೂಬಿರುನುಡಿಯಾಡದ ಜಾಬಾಲಿಯ ಮನವೂ ನೊಂದಿತು. ಆದರೇನು? ಹಾಲು ಒಡೆದು
ಮೊಸರಾದ ಮೇಲೆ ಏನು ತಾನೇ ಮಾಡಲು ಸಾಧ್ಯ? ಕೊಟ್ಟ ಶಾಪವನ್ನು ಹಿಂದೆಗೆದುಕೊಳ್ಳಲು
ಸಾಧ್ಯವೇ? ದೈವೇಚ್ಛೆಯಲ್ಲವಾದರೆ ಸಂಯಮಿಯಾದ ನನಗೇಕೆ ಇಂತಹ ಪ್ರಲಯ ಕೋಪ ಬರುತ್ತಿತ್ತು?.
“ಮಗಳೇ ನಂದಿನಿ ಮರುಗಬೇಡ. ಭೂಲೋಕದಲ್ಲಿ ಮರವಾಗಿ ಗಿಡವಾಗಿ ಪಶು ಪಕ್ಷಿಗಳಾಗಿ
ಮನುಷ್ಯಳಾಗಿ ಹುಟ್ಟುವುದಕ್ಕಿಂತ ಹೊಳೆಯಾಗಿಹರಿಯುವುದೇ ಲೇಸು. ಇದು ಪರಾಶಕ್ತಿಯ ಇಚ್ಛೆ.
ಇಲ್ಲವಾದರೆ ನನ್ನ ನಾಲಗೆಯಿಂದ ಈ ಕೆಡು ನುಡಿ ಶಾಪ ವಚನ ಸಿಡಿಯುತ್ತಿರಲಿಲ್ಲ.
ವಿಶಾಪವಿತ್ತು ನಿನ್ನನ್ನು ವಿಮುಕ್ತಿಗೊಳಿಸುವ ಶಕ್ತಿ ನನಗಿಲ್ಲ. ನೀನೀಗಲೇ
ಭೂಲೋಕದಲ್ಲಿರುವ ಕನಕಾಚಲವನ್ನು ಸೇರಿ ಪರಾಶಕ್ತಿಯನ್ನು ಕುರಿತು ತಪಸ್ಸನ್ನು ಮಾಡು. ಆಕೆ
ನಿನಗೆ ವಿಮೋಚನೆಯ ದಾರಿದೋರಿ ಅನುಗ್ರಹಿಸುತ್ತಾಳೆ” ಹೀಗೆಂದು ನೊಂದ ನಂದಿನಿಯನ್ನು
ಆಶೀರ್ವದಿಸಿದ ಜಾಬಾಲಿಮುನಿ ಭಾರವಾದ ಹೃದಯದಿಂದ ನಿರ್ಜರಾರಣ್ಯದ ತನ್ನ ಆಶ್ರಮಕ್ಕೆ
ಮರಳಿದ.
ನಂದಿನಿ ದೇವಲೋಕವನ್ನೂ ದೇವರಾಜನನ್ನೂ ಬೀಳ್ಗೊಂಡು ಮುನಿಯ ಮಾತನ್ನೇ ನೆನೆಯುತ್ತಾ
ಕನಕಾಚಲಕ್ಕೆ ಬಂದು ಪರಾಶಕ್ತಿಯನ್ನು ಕುರಿತು ತಪಸ್ಸಿಗೆ ತೊಡಗಿದಳು. ಹಲವು ಸಂವತ್ಸರಗಳು
ಸರಿದವು. ಒಂದು ಶುಭದಿನ ಭಕ್ತಪ್ರಿಯಳಾದ ಭಗವತಿಯು ಪ್ರಸನ್ನಳಾಗಿ “ನಂದಿನಿ ನಿನ್ನ
ಅಂತರಂಗದ ಆರಾಧನೆಯಿಂದ ಪ್ರಸನ್ನಳಾಗಿದ್ದೇನೆ ನಿನ್ನ ಮನೋರಥವನ್ನು ಈಡೇರಿಸುತ್ತೇನೆ
ಬೇಡಿಕೋ” ಎಂದಾಗ ನಂದಿನಿಯಆನಂದಕ್ಕೆ ಪಾರವಿಲ್ಲ. “ಅಮ್ಮಾ ಜಗನ್ಮಾತೇ, ಮುನಿ ಶಾಪದಿಂದ
ನನ್ನನ್ನು ಮುಕ್ತಗೊಳಿಸು” ಎಂದು ಬೇಡಿಕೊಂಡಳು. “ನಂದಿನಿ, ಮಹರ್ಷಿಗಳ ಮಾತು ಕೇವಲ ಅಕ್ಷರ
ಪುಂಜವಲ್ಲ ಅದು ಮಂತ್ರ ಸದೃಶವಾದುದು. ಅದನ್ನು ಸುಳ್ಳಾಗಿಸುವುದು ಯಾರಿಂದಲೂ ಅಸಾಧ್ಯ.
ತಪಸ್ವಿಗಳ ಮಾತು ಎಂದೂ ಹುಸಿಯಾಗದು. ನೀನು ನದಿಯಾಗಿ ಹರಿಯಬೇಕಾದುದು ಅನಿವಾರ್ಯ” ಶ್ರೀ
ದೇವಿಯ ಮಾತು ಕೇಳಿ ದಿಕ್ಕೆಟ್ಟ ನಂದಿನಿ “ಅಮ್ಮಾನಾನಿಷ್ಟು ವರ್ಷ ನಿನ್ನನ್ನು
ಆರಾಧಿಸಿದ್ದು ವ್ಯರ್ಥವಾಯಿತೇ? ಎಂದೆಂದೂ ನಾನು ಈ ಮೇದಿನಿಯಲ್ಲಿ ನದೀ ರೂಪದಲ್ಲೇ
ಉಳಿಯಬೇಕೇ? ನನಗೆ ಮುಕ್ತಿಯೇ ಇಲ್ಲವೇ? ರೋದಿಸತೊಡಗಿದ ನಂದಿನಿಯನ್ನು “ನಂದಿನಿ ನೀನು ಮಾಘ
ಮಾಸದ ಪೂರ್ಣಿಮೆಯಂದು ಪ್ರತ್ಯೂಷದಲ್ಲಿ ಈ ಕನಕಾದ್ರಿಯ ಮೂಲ ಭಾಗದಿಂದ ನದೀ ರೂಪವನ್ನು
ತಾಳಿ ಬರದ ಬೇಗೆಯಿಂದ ಬೆಂದ ಭೂಮಿಗೆ ನೀರುಣಿಸುತ್ತಾ ಪಡುಗಡಲನ್ನು ಸೇರು.ಕಾಲಾಂತರದಲ್ಲಿ
ನಾನೇ ನಿನ್ನ ಕಟಿ ಪ್ರದೇಶದಲ್ಲಿ ಲಿಂಗರೂಪದಿಂದ ಅವಿರ್ಭವಿಸುತ್ತೇನೆ. ಆಗ ನಿನಗೆ ಶಾಪ
ವಿಮುಕ್ತಿಯಾಗುತ್ತದೆ ದು:ಖಿಸಬೇಡ” ವೆಂದು ಶ್ರೀದೇವಿಯು ಅಭಯವಿತ್ತು ಅನುಗ್ರಹಿಸಿದಳು.
ಪರಾಶಕ್ತಿಯ ಆದೇಶದಂತೆ ನಂದಿನಿಯು ಮಾಘ ಮಾಸದ ಹುಣ್ಣಿಮೆಯ ರಾತ್ರಿ ಕೊನೆಯ ಜಾವದಲ್ಲಿ
ನದೀ ರೂಪವನ್ನು ತಾಳಿ ಕನಕಾಚಲದ ಮೂಲದಿಂದ ನಿರ್ಜರಾರಣ್ಯದಲ್ಲಿರುವ ಜಾಬಾಲಿಗಳ ಆಶ್ರಮದತ್ತ
ಹರಿದಳು. ಆಮಲಕತೀರ್ಥದ ಕೊಳದಲ್ಲಿ ಪ್ರಾತಃ ಸ್ನಾನವನ್ನು ಮುಗಿಸಿ ಆಶ್ರಮಕ್ಕೆ
ಮರಳುತ್ತಿದ್ದ ಮಹರ್ಷಿಗಳ ಪಾದಾರವಿಂದವನ್ನು ತೊಳೆದು ಪಶ್ಚಿಮಾಂಬುಧಿಯನ್ನು ಸೇರಿದಳು.
ಈಕೆಯೇ ತನ್ನಿಂದಶಪ್ತಳಾದ ನಂದಿನಿ ಎಂಬುದನ್ನು ಅರಿತ ಪ್ರಜ್ಞಾನೇತ್ರರಾದ ಜಾಬಾಲಿಗಳು
ಇತ್ತೋಳುಗಳನ್ನು ಮೇಲೆತ್ತಿ ನಂದಿನಿಯನ್ನು ಮನಸಾರೆ ಹರಸಿದರು. ಮಾಘ ಶುದ್ಧ ಪೂರ್ಣಿಮೆ
ನಂದಿನಿ ನದಿಯಾಗಿ ಪೃಥ್ವಿಯಲ್ಲಿ ಹರಿದ ಪುಣ್ಯ ದಿನ. ಬರಗಾಲದ ಬೆಂಕಿಯಾರಿದ ಮಹಾದಿನ.
ಮರ್ತ್ಯರು ಅನ್ನ ನೀರನ್ನು ಕಂಡ ಸುದಿನ.
ಹಿಂದೊಂದು ಕಾಲದಲ್ಲಿ ಶುಂಭನಿಶುಂಭರೆಂಬ ರಾಕ್ಷಸ ಸೋದರರು ದೇವತೆಗಳನ್ನು ಧೃತಿಗೆಡಿಸಿ
ಮೂರುಲೋಕಗಳ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ್ದರು. ಅವರ ಪ್ರಧಾನ ಮಂತ್ರಿಯೇ
ಅರುಣಾಸುರ. ಶ್ರೀದೇವಿ ಶುಂಭ ನಿಶುಂಭರನ್ನು ಸಂಹಾರ ಮಾಡಿದ ಹೊತ್ತು ಈತ ಹೇಗೋ
ತಲೆಮರೆಸಿಕೊಂಡು ಪಾತಾಳವನ್ನು ಸೇರಿ ತಪೋ ಬಲದಿಂದ ದೀರ್ಘಾಯುಷಿಯಾಗಿ ಕಲಿಯುಗದ ಬರವಿಗಾಗಿ
ಕಾಯುತ್ತಾ ಇದೀಗಏಕ ವೀರಾದ್ರಿ ಎಂಬ ನಗರವನ್ನು ಕಟ್ಟಿ ಚಂಡ ಪ್ರಚಂಡರೆಂಬ ಮಂತ್ರಿಗಳೊಡನೆ
ಬಲಿಷ್ಟವಾದ ರಾಕ್ಷಸ ಸಾಮ್ರಾಜ್ಯ ಸ್ಥಾಪನೆಯ ಕನಸನ್ನು ಕಾಣುತ್ತಾ ಕಾಲ ನೂಕುತ್ತಿದ್ದ.
“ಬಲಿಷ್ಟವಾದ ದಾನವ ಸಾಮ್ರಾಜ್ಯ ಒಂದನ್ನು ಕಟ್ಟಿ ಸುಭದ್ರವಾಗಿ ಚಿರಸ್ಥಾಯಿಯಾಗಿ
ನಿಲ್ಲಿಸಲು ದೇಹಬಲ, ಬುದ್ಧಿಬಲ, ಜನಬಲ, ಧನಬಲ, ಸೇನಾ ಬಲಗಳಷ್ಟೇ ಸಾಕಾಗುವುದಿಲ್ಲ
ದೈವಬಲವೂ ಬೇಕಾಗುತ್ತದೆ. ಅದನ್ನು ತಪಸ್ಸಿನ ಮೂಲಕ ಗಳಿಸಬೇಕಾಗುತ್ತದೆ. ಹಾಗಾಗಿ ನೀನು
ವಾಣೀರಮಣನಾದ ಭಗವಾನ್ ಹಿರಣ್ಯಗರ್ಭನನ್ನು ಒಲಿಸಿಕೊಂಡು ಅನನ್ಯ ಸಾಧಾರಣವಾದ ವರವನ್ನು
ಪಡೆದು ಆ ಬಳಿಕ ಸ್ವರ್ಗಾದಿಲೋಕಗಳನ್ನು ಜಯಿಸುವುದಕ್ಕೆ ಮುಂದಾಗುವುದು ಒಳಿತೆಂಬ”
ರಾಕ್ಷಸವರೇಣ್ಯರ ಹಿತೋಕ್ತಿಯನ್ನು ಪುರಸ್ಕರಿಸಿ, ಘನಘೋರವಾದ ಅಮರವನಕ್ಕೆ ತೆರಳಿ ಹಲವು
ವರ್ಷಗಳ ಕಾಲ ಉಗ್ರವಾದ ತಪಸ್ಸನ್ನು ಆಚರಿಸಿದ. ಮೊದಲು ಒಂದು ಹೊತ್ತು ಆಹಾರವನ್ನು
ಸ್ವೀಕರಿಸುತ್ತಾ ಕುಳಿತು ತಪಸ್ಸು ಮಾಡುತ್ತಿದ್ದ. ಬಳಿಕ ನೀರನ್ನಷ್ಟೇ ಕುಡಿದು ನಿಂತು
ತಪಸ್ಸು ಮಾಡುತ್ತಿದ್ದ. ಮತ್ತೆ ನಿರಾಹಾರನಾಗಿ ಒಂದೇ ಕಾಲಿನಲ್ಲಿ ನಿಂತು
ತಪಸ್ಸುಮಾಡತೊಡಗಿದ. ಇವನ ತಪೋಜ್ವಾಲೆಯಿಂದ ಬಾನು ಬಿಸಿಯಾಯಿತು, ಭಾನು ಬೆಮರಿದ ಕಡಲು
ಕುದಿಯಿತು. ಕುಂಭಿನಿ ಕಾದು ಕೆಂಡವಾಯಿತು. ದೇವತೆಗಳು ತತ್ತರಿಸಿದರು. ಮೂರು ಲೋಕದ ಜನತೆ
ಸಂತ್ರಸ್ತವಾಯಿತು. ಸರಸ್ವತೀ ಸಮೇತನಾಗಿ ಹಿರಣ್ಯಗರ್ಭನು ಅರುಣನ ಮುಂದೆ ಪ್ರತ್ಯಕ್ಷನಾದ
“ಅರುಣ ನಿನ್ನ ತಪಃ ಸಾಧನೆಗೆ ಮೆಚ್ಚಿದ್ದೇನೆ ನಿನ್ನ ಮನೋರಥವನ್ನು ಬೇಡಿಕೋ” ಎಂದ.
“ಚತುರ್ಮುಖ ನೀನು ಪ್ರಸನ್ನನಾದುದು ಸತ್ಯವಾದರೆ ನನಗೆ ಅಮರತ್ವವನ್ನು ಅನುಗ್ರಹಿಸು”
ನಸುನಗುವಿನೊಂದಿಗೆ ವಾಣೀರಮಣ ಮಾರ್ನುಡಿದ –“ಅರುಣ! ಈ ವಿಶ್ವ ವ್ಯಾಪಾರಕ್ಕೊಂದು ನಿಯತಿ
ಇದೆ. ಅದೇ ಋತ. ಅದನ್ನು ಮೀರಿ ನಡೆಯುವುದಕ್ಕೆ ದೇವತೆಗಳಿಗೂ ಅಧಿಕಾರವಿಲ್ಲ. ಅಮರತ್ವವೆಂಬ
ಅಸಾಧ್ಯ ಹಾಗೂ ಅಸಂಭವವಾದ ವರವನ್ನು ನೀನು ಕೇಳಕೂಡದು. ನಾನು ಕೊಡುವಂತೆಯೂ ಇಲ್ಲ. ಈ
ಜಗತ್ತುಪ್ರತಿಕ್ಷಣವೂ ನವೋನವವಾಗಿ ಕಾಣುವುದಕ್ಕೆ ಕಾರಣ ಮರಣ. “ಜಾತಸ್ಯ ಮರಣಂ ಧ್ರುವಂ”
ಕಾಣುವ ಆಕಾರಕ್ಕೊಂದು ಅಂತ್ಯವಿರಲೇಬೇಕು. ಹಾಗಾಗಿ ಅಮರತ್ವವನ್ನು ಹೊರತುಪಡಿಸಿ ಬೇರೆ ಏನು
ಬೇಕಾದರೂ ಕೇಳು, ಕೊಟ್ಟು ನಿನ್ನ ಮನೋರಥವನ್ನು ಈಡೇರಿಸುತ್ತೇನೆ.
“ಹಿರಣ್ಯಗರ್ಭ! ನೀನು ಅಮರತ್ವವನ್ನು ದಯಪಾಲಿಸಲಾರೆ ಎಂಬುದು ನನಗೆ ಮೊದಲೇ ಗೊತ್ತು.
ಮೃತ್ಯುಂಜಯನನ್ನು ಬಿಟ್ಟರೆ ಮೃತ್ಯುವಿಗೆ ಮೃತ್ಯುವಾಗುವ ಮತ್ತೊಬ್ಬನಿಲ್ಲ. ಹೋಗಲಿ ಬಿಡು.
ಸುರನರೋರಗ ಯಕ್ಷಗಂಧರ್ವ ಕಿನ್ನರ ಕಿಂಪುರಷ ಸಿದ್ಧ ಸಾಧ್ಯ ವಿದ್ಯಾಧರೋಪ್ಸರಗಣಗಳಿಂದಲೂ,
ಸ್ತ್ರೀಪುರುಷರಿಂದಲೂ, ಎರಡು ಕಾಲಿನ ಹಾಗೂ ನಾಲ್ಕು ಕಾಲಿನ ಪ್ರಾಣಿಗಳಿಂದಲೂ,
ಶಸ್ತ್ರಾಸ್ತ್ರಗಳಿಂದಲೂ ನನಗೆ ಮರಣಬರಕೂಡದು. ಹೀಗೆಂದು ವರವಿತ್ತು ಅನುಗ್ರಹಿಸಿ
ನನ್ನನ್ನು ಉದ್ಧರಿಸು ತಂದೆಯೇ ಎಂದು ಅಸುರ ಪ್ರಾರ್ಥಿಸಿದಾಗ ಚತುರ್ಮುಖನು ಅಡ್ಡ
ಮಾತನಾಡದೇ “ತಥಾಸ್ತು” ಎಂದ.
ಇದೀಗ ಅರುಣಾಸುರನ ಸಂತಸಕ್ಕೆ ಸೀಮೆ ಇಲ್ಲ. ಅಕ್ಷರಶಃ ಅಮರತ್ವವನ್ನು ಪಡೆಯದೇ ಹೋದರೂ
ತಾತ್ಪರ್ಯದಿಂದ ಆತ ಅಮರನೇ ಆಗಿದ್ದ. ಅರುಣ ಅಷ್ಟಕ್ಕೇ ಸುಮ್ಮನಾಗಲಿಲ್ಲ. ವಿಧಾತನೊಂದಿಗೆ
ಆಗಮಿಸಿದ ವಾಣಿಗೆ ನಮಸ್ಕರಿಸಿ “ಅಮ್ಮಾ ನಿನ್ನ ಆಗಮನ ಬರಡಾಗಕೂಡದು ವಾತ್ಸಲ್ಯದ
ನೆನಹಿಗಾಗಿ ನೀನೊಂದು ವರವಿತ್ತು ಅನುಗ್ರಹಿಸು” ಎಂದು ಪ್ರಾರ್ಥಿಸಿದ. ಪ್ರಸನ್ನಳಾದ
ಶಾರದೆ ಆತನಿಗೆ ಗಾಯತ್ರಿಮಂತ್ರವನ್ನು ಉಪದೇಶಿಸಿ “ಎಲ್ಲಿಯವರೆಗೆ ನೀನು ಪ್ರತಿದಿನ
ಗಾಯತ್ರಿಯನ್ನು ಬಿಡದೇ ಉಪಾಸನೆ ಮಾಡುವಿಯೋ ಅಲ್ಲಿಯ ತನಕ ಮೃತ್ಯು ನಿನ್ನ
ಮೈಮುಟ್ಟುವುದಿಲ್ಲ. ಸಾವು ಸನಿಹ ಸುಳಿಯುವುದಿಲ್ಲ. ಆದರೆ ಎಂದು ನೀನು ಗಾಯತ್ರೀಯ
ಅನುಷ್ಟಾನವನ್ನು ಬಿಡುತ್ತಿಯೋ ಅಂದೇ ನಿನಗೆ ಮೃತ್ಯು” ಎಂದು ಅನುಗ್ರಹಿಸಿದಳು.
“ಏಕಾಕ್ರಿಯಾ ದ್ವ್ಯರ್ಥ ಕರೀಬಭೂವ” ಎಂಬಂತೆ ಅರುಣಾಸುರನು ಪ್ರತಿಪ್ರತ್ಯೇಕವಾಗಿ ವಾಣೀ
ಹಿರಣ್ಯಗರ್ಭರ ಪರಮಾನುಗ್ರಹಕ್ಕೆ ಪಾತ್ರನಾದ ಗರ್ವದಿಂದ ಬೀಗಿದ. ಅಹಂಕಾರ ತಲೆಗಡರಿತು.
ಗಾಯತ್ರೀ ಮಂತ್ರಾನುಷ್ಠಾನದಿಂದ ಅಸುರನ ಆತ್ಮವಿಶ್ವಾಸ, ಮನೋಬಲ, ದೇಹಬಲ, ಬುದ್ಧಿಬಲಗಳು
ಸಮಭಿವರ್ಧಿಸಿ ಸುಪ್ರತಿಷ್ಠಿತವಾದವು. ಅರುಣನ ವಿಕ್ರಮ ವಾಹಿನಿಗೆ ತಡೆ ಇಲ್ಲವಾಯಿತು. ಆತ
ಮತ್ತೆಹೊತ್ತುಗಳೆಯಲಿಲ್ಲ. ಚಂಡ ಪ್ರಚಂಡರ ದಂಡನಾಯಕತ್ವದಲ್ಲಿ ದಾನವರ ದಂಡಿನೊಂದಿಗೆ
ದೇವತೆಗಳ ಬೀಡಾದ ದೇವಧಾನಿ ಸ್ವರ್ಗಕ್ಕೆ ದಾಳಿಯಿಟ್ಟ. ವರಬಲ ಭೂಯಿಷ್ಟನಾದ ಈತನನ್ನು
ಎದುರಿಸಲಾರದೇ ಇಂದ್ರಾದಿ ದೇವತೆಗಳು ಕಾಳಗದಲ್ಲಿ ಸೋತು ಹೋದರು. ಅರುಣ ತಾನು ಸ್ವರ್ಗ
ಸಿಂಹಾಸನವನ್ನು ಏರದೇ ತನ್ನ ಅಧೀನನಾಗಿ ಸ್ವರ್ಗವನ್ನಾಳುತ್ತಾ ಕಾಲ ಕಾಲಕ್ಕೆ ಕಪ್ಪ
ಕಾಣಿಕೆಗಳನ್ನು ಸಲ್ಲಿಸುವಂತೆ ಪಾಕಶಾಸನನಿಗೆಶಾಸನ ಮಾಡಿ ಅಂತೆಯೇ ಪಾತಾಳ ಲೋಕವನ್ನೂ
ಮರ್ತ್ಯಲೋಕವನ್ನೂ ತನ್ನ ಶಾಸನಕ್ಕೆ ಒಳಪಡಿಸಿ ತ್ರಿಭುವನದಲ್ಲೂ ತನ್ನ ಏಕಾಧಿಪತ್ಯವನ್ನು
ಸ್ಥಾಪಿಸಿ ಅಪ್ರತಿಹತ ವೀರನಾಗಿ ಮೆರೆಯುತ್ತಿದ್ದ.
ದಿನದಿಂದ ದಿನಕ್ಕೆ ಅರುಣಾಸುರನ ಕೀರ್ತಿ ತೇಜೋ ಬಲಗಳು ಹೆಚ್ಚುತ್ತಿದ್ದವು. ಒಂದಿನಿತು
ಲೋಪವಾಗದಂತೆ ನಿಯತವಾಗಿ ಗಾಯತ್ರಿಯ ಜಪಾನುಷ್ಠಾನವನ್ನು ಅತ್ಯಂತ ಶ್ರದ್ಧೆಯಿಂದ
ಮಾಡುತ್ತಿದ್ದ ಆತನ ಉಪಾಸನಾವಿಧಿ, ಅನುಷ್ಠಾನಕ್ರಮ, ಅನನ್ಯ ಸಾಧಾರಣವಾಗಿತ್ತು. ಗಾಯತ್ರಿ
ಮಂತ್ರವೇ ಆತನ ಉಸಿರಾಗಿತ್ತು. ಅನ್ನವಾಗಿತ್ತು. ಆತ್ಮವಾಗಿತ್ತು. ಹಾಗಾಗಿ ಆತನಿಗೆ
ಸೋಲೆಂಬುದು ಮೊಲದ ಕೋಡು.ಸಂಕಟವೆಂಬುದು ಆಗಸದ ತಾವರೆ. ಸೋತ ದೇವತೆಗಳು ಅರುಣನ ಸೋಲಿಗಾಗಿ
ಹಂಬಲಿಸುತ್ತಿದ್ದರು.
ದೇವೇಂದ್ರ ತನ್ನ ಪರಿವಾರದೊಂದಿಗೆ ಸತ್ಯ ಲೋಕಕ್ಕೆ ಹೋಗಿ ಸೃಷ್ಟಿಕರ್ತನ ಸಮಕ್ಷ
ದೇವತೆಗಳ ಸಂಕಷ್ಟವನ್ನು ತೋಡಿಕೊಂಡ. “ವರವನ್ನು ಕೊಟ್ಟವನು ನಾನೇ ಆದರೆ ಆತನನ್ನು
ನಿಗ್ರಹಿಸುವುದು ನನ್ನಿಂದ ಅಸಾಧ್ಯ” ವೆಂದ ಚತುರ್ಮುಖನನ್ನು ಮುಂದಿಟ್ಟುಕೊಂಡು ಶತಮಖ
ಪ್ರಮುಖರಾದ ವೃಂದಾರಕರು ರಜತಾದ್ರಿಯನ್ನು ಸೇರಿ ಅಸುರನಿಂದ ಬಂದ ಬವಣೆಯನ್ನು ಭವನಲ್ಲಿ
ಬಿನ್ನವಿಸಿಕೊಂಡರು. ಪರಮಶಿವ ಇವರನ್ನುಕೂಡಿಕೊಂಡು ಶ್ವೇತ ದ್ವೀಪಕ್ಕೆ ಬಂದು
ಶ್ರೀಮನ್ನಾರಾಯಣನಲ್ಲಿ ಅಮರರ ಆಪತ್ತನ್ನು ಆತಂಕವನ್ನೂ ಅರುಹಿದಾಗ ಆ ಆದಿನಾರಾಯಣ ನುಡಿದ-
“ಯದಾರುಣಾಖ್ಯಃ ತ್ರೈಲೋಕ್ಯೇ ಮಹಾಬಾಧಾಂ ಕರಿಷ್ಯತೀ ತದಾಹಂ ಭ್ರಾಮರಂ ರೂಪಂ
ಕ್ವತ್ವಾಸಂಖ್ಯೇಯಷಟ್ಟದಂ|| ಅರುಣದಾನವನು ಮೂರು ಲೋಕಕ್ಕೂ ಉಪಟಳವನ್ನು ಕೊಡುತ್ತಿರುವಾಗ
ತಾನು ಭ್ರಮರ ರೂಪದಿಂದ ಆತನನ್ನು ಸಂಹರಿಸುತ್ತೇನೆಂದು ಶ್ರೀದೇವಿಯು ಈ ಮುಂಚೆಯೇ
ಅಭಯವನ್ನಿತ್ತಿದ್ಧಾಳೆ. ಹಾಗಾಗಿ ನಾವೆಲ್ಲರೂ ಮೇರು ಪರ್ವತದ ಮೂಲವನ್ನು ಸೇರಿ ಕದಂಬ
ವನವಾಸಿನಿಯಾದ ಆ ಆದಿಪರಾಶಕ್ತಿಯನ್ನು ಧ್ಯಾನಿಸೋಣ”.
ಸಮಸ್ತ ಸುರ ಪರಿವಾರದೊಂದಿಗೆ ಶ್ರೀಮನ್ನಾರಾಯಣ ಮೇರು ಪರ್ವತದ ಮೂಲ ದೇಶಕ್ಕೆ ಬಂದು
ಭಗವತಿಯನ್ನು ಧ್ಯಾನಿಸಿದಾಗ ಮೈದೋರಿದ ಆ ಆದಿಪರಾಶಕ್ತಿಯನ್ನು ತ್ರಿಮೂರ್ತಿಗಳೂ ದೇವತೆಗಳೂ
ಬಹು ವಿಧವಾಗಿ ಸ್ತುತಿಸಿದರು. ಪ್ರಸನ್ನಳಾದ ಜಗನ್ಮಾತೆಯು “ನಿಮ್ಮ
ಸಂಕಷ್ಟವೇನೆಂಬುದನ್ನು ಬಲ್ಲೆ. ಆದರೆ ಎಲ್ಲಿಯವರೆಗೆ ಆತ ಗಾಯತ್ರಿ ಮಂತ್ರಾನುಷ್ಠಾನವನ್ನು
ಲೋಪವಿರದಂತೆ ಮಾಡುತ್ತಿರುತ್ತಾನೋಅಲ್ಲಿಯವರೆಗೆ ಸಾಕ್ಷಾತ್ ಮೃತ್ಯುವಿಗೂ ಆತನನ್ನು
ಮುಟ್ಟಲು ಸಾಧ್ಯವಿಲ್ಲ. ಹಾಗಾಗಿ ಸುರಾಚಾರ್ಯನಾದ ಬೃಹಸ್ಪತಿ ವೇಷಾಂತರದಿಂದ ಆತನ ಬಳಿಗೆ
ಹೋಗಿ ನಾಸ್ತಿಕ್ಯವನ್ನು ಬೋಧಿಸಿ ಗಾಯತ್ರ್ಯನುಷ್ಠಾನವನ್ನು ತೊರೆಯುವಂತೆ ಮಾಡಲಿ ಬಳಿಕ
ಲೋಕಕಂಟಕನಾದ ಆತನನ್ನು ಸಂಹರಿಸಿ, ಲೋಕಕ್ಷೇಮವನ್ನುಂಟು ಮಾಡುತ್ತೇನೆ” ಎಂದು ಅಭಯವನ್ನು
ಇತ್ತಳು.
ಸುರಾಚಾರ್ಯರಾದ ಬೃಹಸ್ಪತಿ ಅರುಣಾಸುರನ ಅನುಷ್ಠಾನ ಮಂದಿರದಲ್ಲಿ ವೃದ್ಧ
ಬ್ರಾಹ್ಮಣನಾಗಿ ಕಾಣಿಸಿಕೊಂಡ. “ನೀನಾರು? ಯಾಕೆ ಬಂದೆ?” ಎಂಬ ದಾನವ ದೊರೆಯ ಪ್ರಶ್ನೆಗೆ
“ತ್ರಿಲೋಕ ವಿಜಯಿಯಾದ ನಿನ್ನನ್ನು ಕಂಡು ಸಾಷ್ಟಾಂಗ ಪ್ರಣಾಮ ಸಲ್ಲಿಸಬೇಕೆಂಬ ಆಸೆಯಿಂದ
ಬಂದೆ ಆದರೆ ಇಲ್ಲಿ ಬಂದು ನಿನ್ನನ್ನು ಕಂಡು ನಗು ಬಂತು, ಕನಿಕರ ಮೂಡಿತು. ತ್ರಿಭುವನದ
ಜನತೆಗೆ ಅಶನ ವಸನಾದಿಗಳನ್ನಿತ್ತುಅನುಗ್ರಹಿಸುವ ಸರ್ವೇಶ್ವರನಾದ ನೀನು ಯಾವುದೋ ಕೆಲಸಕ್ಕೆ
ಬಾರದ ಮಂತ್ರಗಳನ್ನು ಪಠಿಸುತ್ತಾ ಮತ್ತಾರಿಗೋ ಮಣಿಯುತ್ತಿದ್ದೀಯಲ್ಲ ಇದೇನು ಮಂಕೋ?
ಮೋಡಿಯೋ? ನನಗರ್ಥವಾಗುವುದಿಲ್ಲ. ನೀನು ಆಳಲ್ಲ ಆಳುವವ. ನೀನು ದಾಸನಲ್ಲ ದೊರೆ.
ಪ್ರಜೆಯಲ್ಲ ಪ್ರಭು. ನೀನು ಪರಾವಲಂಬಿಯಲ್ಲ ಸ್ವಾವಲಂಬಿ. ನೀನು ಪೂಜಕನಲ್ಲ ಪೂಜ್ಯ. ಸಕಲ
ಲೋಕೈಕವಂದ್ಯನಾದ ನೀನೇ ಮತ್ತಾರಿಗೋ ತಲೆಬಾಗುವುದಾದರೆಇದಕ್ಕಿಂತ ಅವಮಾನಾಸ್ಪದವಾದ ಸಂಗತಿ
ಬೇರಾವುದಿದೇ?” ಬೃಹಸ್ಪತಿಯ ಮಾತಿನ ವರಸೆ ಅರುಣನಿಗೆ ಅರ್ಥವಾಗಲಿಲ್ಲ. ಆತ ಮರುನುಡಿದ
”ಸ್ವಾಮೀ ಬ್ರಾಹ್ಮಣರೇ ತಮ್ಮ ತೇಜಸ್ಸು ಪ್ರಖರವಾಗಿದೆ. ಮಾತು ಮಾರ್ಮಿಕವಾಗಿದೆ. ಆದರೆ
ತಾವು ಹೇಳುತ್ತಿರುವ ವಿಷಯ ಮಾತ್ರ ನನಗೆ ಗೊಂದಲವನ್ನುಂಟು ಮಾಡುತ್ತಿದೆ. ಸ್ವಾಮೀ!
ಬ್ರಹ್ಮದೇವನ ಅನುಗ್ರಹದಿಂದ ನಾನು ತ್ರಿಲೋಕ ವಿಜಯಿಯಾದೆ. ನನ್ನ ಸತ್ತ್ವ ಸಾಹಸ,
ಸಿದ್ಧಿ,ಪ್ರಸಿದ್ಧಿಗಳಿಗೆ ಕಾರಣವಾದುದು ಶಾರದಾ ಮಾತೆ ಅನುಗ್ರಹಿಸಿದ ಗಾಯತ್ರೀ ಮಂತ್ರ
ಇವೆರಡರ ಮಹತ್ವವನ್ನು ಅಲ್ಲಗಳೆಯುವುದೆಂದರೆ ಅದು ಆತ್ಮಹತ್ಯೆಯೇ ಸರಿ. ದಿಗನ್ತ
ವಿಶ್ರಾನ್ತವಾದ ನನ್ನ ವಿಜಯ ವಿಭವ ವಿಕ್ರಮ ಕೀರ್ತಿ ಖ್ಯಾತಿಗಳಿಗೆ ಕಾರಣವಾದುದನ್ನು ನಾನು
ಗೌರವಿಸಿ ಪೂಜಿಸುವುದರಲ್ಲಿ ತಪ್ಪೇನಿದೆ? ನನ್ನ ಉನ್ನತಿಗೆ ಕಾರಣವಾದುದನ್ನು ಮರೆತರೆ
ಮನ್ನಣೆ ಕೊಡದಿದ್ದರೆ ಅದು ಕೃತಘ್ನತೆಯಾಗುವುದಿಲ್ಲವೇ?
ಅರುಣನ ಸುದೀರ್ಘವಾದ ಪೂರ್ವಪಕ್ಷವನ್ನೂ ವಾದವನ್ನು ನಸುನಗುತ್ತಾ ಆಸ್ಥಯಿಂದ ಆಲಿಸಿದ
ವಿಪ್ರವೇಷಧಾರಿಯಾದ ವಾಚಸ್ಪತಿ ತನ್ನ ಮಾತಿನ ಮೋಡಿಯಿಂದ ಅಸುರನನ್ನು ಮರುಳುಗೊಳಿಸಲು
ಮುಂದಾದ. “ಅಯ್ಯಾ ಅಸುರ ಚಕ್ರವರ್ತಿ, ನಿನ್ನ ಮಾತೇನೋ ಮೇಲುನೋಟಕ್ಕೆ ಸರಿಯೆಂದೇ
ತೋರುತ್ತದೆ. ಆದರೆ ತುಸು ತಾತ್ವಿಕವಾಗಿ ಚಿಂತಿಸಿದರೆ ನಿನ್ನ ಮಾತು ತಿರುಳಿಲ್ಲದ್ದೆಂದು
ನಿನಗೇ ತಿಳಿಯುತ್ತದೆ. ವರಕೊಡುವವರು ಯಾರು? ಪಡೆದುಕೊಳ್ಳುವವರು ಯಾರು? ಯಾರು ಯಾರನ್ನು
ಉದ್ಧರಿಸುತ್ತಾರೆ? ಕೃತಜ್ಞತೆ ಕೃತಘ್ನತೆಗಳೆಂದರೆ ಏನು? ಪ್ರತಿಫಲವನ್ನು ಪಡೆಯದೇ
ಉಪಕರಿಸುವವರು ಯಾರಿದ್ದಾರೆ ಈ ಬ್ರಹ್ಮಾಂಡದಲ್ಲಿ? ಶಕ್ತಿ ಸಾಹಸ ಆತ್ಮಬಲಗಳು ಯಾವುದೋ
ಒಂದು ಮಂತ್ರದಿಂದ ಯಾರದೋ ಅನುಗ್ರಹದಿಂದ ಸಿಗುವಂತಹ ಪದಾರ್ಥಗಳಲ್ಲ. ವಿದ್ವಾಂಸನೂ
ವಿವೇಕಿಯೂ ಆದ ನೀನು ಅಂಧ ಶ್ರದ್ಧೆಯುಳ್ಳ ಅಜ್ಜನಂತೆವ್ಯವಹರಿಸಬೇಡ. ನೀನು ಎಂದಿಗೂ
ಪೂಜಕನಲ್ಲ ಆರಾಧಕನಲ್ಲ. ನೀನು ಸಕಲ ಲೋಕೈಕ ಪೂಜ್ಯ ಸರ್ವಜನಾರಾಧ್ಯ. ಜಗತ್ತು ನಿನ್ನನ್ನು
ಪೂಜಿಸಬೇಕೇ ಹೊರತು ನೀನು ಮತ್ತಾರನ್ನೋ ಪೂಜಿಸುವುದು ಸರ್ವಥಾ ಸರಿಯಲ್ಲ.
“ಉದ್ಧರೇತ್ ಆತ್ಮನಾತ್ಮಾನಂ ನಾತ್ಮಾನಮವಸಾದಯೇತ್” ತನ್ನನ್ನು ತಾನು
ಉದ್ಧರಿಸಿಕೊಳ್ಳಬೇಕು. ತನ್ನ ನಾಶವನ್ನು ತಾನೇ ಮಾಡಿಕೊಳ್ಳಬಾರದು. “
ಆತ್ಮೈವಹ್ಯಾತ್ಮನೋಬನ್ಧು: ಆತ್ಮೈವರಿಪುರಾತ್ಮನಃ” ತನಗೆ ತಾನೇ ಗೆಳೆಯ ತನಗೆ ತಾನೇ ಶತ್ರು
ಯಾರನ್ನೂ ಯಾರೂ ಉದ್ಧರಿಸುವುದಿಲ್ಲ. ಆತನಿಗೆ ಆತನೇ ಉದ್ಧಾರಕ, ಮಾರ್ಗದರ್ಶಕ, ಗುರು
ಗೆಳೆಯ. ಇದು ಉಪನಿಷತ್ತಿನ ಮಾತು. ಬ್ರಹ್ಮ ನಿನಗೆ ವರವಿತ್ತುದುಅನುಗ್ರಹವಲ್ಲ. ಉಪಕಾರವೂ
ಅಲ್ಲ ವ್ಯಾಪಾರ. ನೀನು ಕಾಯಕ್ಲೇಶವನ್ನನುಭವಿಸಿ ತಪಸ್ಸು ಮಾಡಿದ ಕಾರಣ ಬ್ರಹ್ಮ ಒಲಿದ.
ತಪಸ್ಸೆಂಬ ಧನವನ್ನು ಪಡೆದು ವರವೆಂಬ ಪದಾರ್ಥವನ್ನಿತ್ತ. ತಪಸ್ಸು ಮಾಡಿದವರಿಗೆ ವರ
ಕೊಡುವುದು ಅವನ ಕರ್ತವ್ಯ. ಪಾಯಸ ರುಚಿಯಾಗಿದೆ ಎಂದು ಸೌಟಿಗೆ ಯಾರೂ ಕೃತಜ್ಞತೆ
ಸಲ್ಲಿಸುವುದಿಲ್ಲ. ಮರ ಕಡಿವ ಕೊಡಲಿಗೆ ಕಸ ತೆಗೆವ ಹಿಡಿಸೂಡಿಗೆ ಯಾರೂ ಪೂಜೆ
ಮಾಡುವುದಿಲ್ಲ. ಶಕ್ತಿ ಸಾಹಸ ಬಲಬುದ್ಧಿ ಸಾಮರ್ಥ್ಯಗಳಿರುವುದು ಮಂತ್ರದಲ್ಲಲ್ಲ
ನಿನ್ನಲ್ಲಿ. ತನ್ನ ನಾಭಿಯಲ್ಲೇ ಇರುವ ಪರಿಮಳವನ್ನು ತಿಳಿಯದ ಕಸ್ತೂರಿ ಮೃಗ ನೀನು. ಶಾರದೆ
ನಿನಗೆ ನೀಡಿದ್ದು ಮಂತ್ರವನ್ನಲ್ಲ ಭ್ರಮೆಯನ್ನು. ನಿನ್ನನ್ನು
ಮುಷ್ಟಿಯಲ್ಲಿಟ್ಟುಕೊಳ್ಳಲು ದೇವತೆಗಳು ಹೂಡಿದ ತಂತ್ರವದು. ಕೇವಲ ಗಾಯತ್ರೀ ಮಂತ್ರದಿಂದಲೇ
ನೀನು ಎಲ್ಲವನ್ನೂ ಸಾಧಿಸಿದ್ದು ಸತ್ಯವಾದರೆ ಅದರಲ್ಲಿ ನಿನ್ನ ಹಿರಿಮೆಯೇನು? ಆ
ಮಂತ್ರವನ್ನು ಪಡೆದ ಯಃಕಶ್ಚಿತ್ ಪುರುಷನೂಮತ್ತೊಬ್ಬ ಅರುಣಾಸುರನಾಗಬಲ್ಲ. ಅಲ್ಲಿ ಮಂತ್ರದ
ಮಹಿಮೆ ಕಂಡಿತೇ ಹೊರತು ನಿನ್ನ ಹೆಚ್ಚಳವಲ್ಲ. ಎಲ್ಲಿಯವರೆಗೆ ಈ ಮಂತ್ರಾನುಷ್ಠಾನವನ್ನು
ಮಾಡಿಕೊಂಡಿರುತ್ತಿಯೋ ಅಲ್ಲಿಯವರೆಗೆ ನೀನು ಪ್ರಭುವಲ್ಲ ದಾಸ. ನೀನು ಸಬಲನಲ್ಲ ದುರ್ಬಲ.
ನೀನು ಸ್ವತಂತ್ರನಲ್ಲ ಪರತಂತ್ರ. ನೀನು ಸ್ವಾಮಿಯಲ್ಲ ಭೃತ್ಯ. ನೀನು ಒಡಯನಲ್ಲ ಆಳು. ನೀನು
ಸ್ವಾವಲಂಬಿಯಲ್ಲ ಪರಾವಲಂಬಿ. ನೀನು ಸಾರ್ವಭೌಮನಲ್ಲ ಸಾಮಾನ್ಯ. ನೀನುಧೀರನಲ್ಲ ಭೀರು.
ನೀನು ಶ್ರೇಷ್ಠನಲ್ಲ ಕನಿಷ್ಠ”.
ಬಗೆ ಚುಚ್ಚುವ ಈ ಬ್ರಾಹ್ಮಣನ ಭಾಷಣ ಕೇಳಿ ಅರುಣಾಸುರ ನಖಶಿಖಾಂತ ಉರಿದು ಹೋದ. ಅವನ
ಗರ್ವ ಗರಿಗೆದರಿತು. ಅಹಂಕಾರ ತಲೆಗೇರಿತು. ಬುದ್ಧಿ ಹಳ್ಳ ಹಿಡಿಯಿತು. ತನಗಿಂತ ಮಿಗಿಲಾದ
ಶಕ್ತಿ ಈ ವಿಶ್ವದಲ್ಲೇ ಇಲ್ಲ ಎಂಬ ಭಾವ ಬಲವಾಯಿತು. ಮುದಿಹಾರುವನ ಮೇಧಾಶಕ್ತಿಯನ್ನು
ಕೊಂಡಾಡಿದ, “ಇಂದಿನಿಂದ ನಾನು ಯಾವ ಮಂತ್ರವನ್ನೂ ಜಪಿಸುವುದಿಲ್ಲ ಯಾವ ದೇವರನ್ನೂ
ಪೂಜಿಸುವುದಿಲ್ಲ. ನಾನೇಎಲ್ಲರಿಗೂ ದೇವರು ಎಲ್ಲರೂ ನನ್ನನ್ನೇ ಪೂಜಿಸಬೇಕು. ಇದಕ್ಕೆ ನೀವೇ
ಸಾಕ್ಷಿ” ಎಂದು ಪ್ರತಿಜ್ಞಾ ಬದ್ಧನಾದ. ತಾನು ಬಂದ ಕೆಲಸ ಭಗವತಿಯ ಅನುಗ್ರಹದಿಂದ
ಸಫಲವಾಯಿತೆಂಬ ಸಂತಸದಿಂದ ಬ್ರಾಹ್ಮಣ ರೂಪದಲ್ಲಿದ್ದ ಬೃಹಸ್ಪತಿ ಅಸುರನಿಂದ ಬೀಳ್ಗೊಂಡು
ಸುರಲೋಕವನ್ನು ಸೇರಿದ. ಅರುಣಾಸುರ ಗಾಯತ್ರ್ಯನುಷ್ಠಾನವನ್ನು ಪರಿತ್ಯಜಿಸಿದ ಕಾರಣ ಸುರರ
ಸಂತೋಷಕ್ಕೆ ಪಾರವಿಲ್ಲವಾಯಿತು.
ಬೃಹಸ್ಪತಿಯ ಮಾತಿನ ಮೋಡಿಯಿಂದಾಗಿ ಅರುಣಾಸುರನ ಬುದ್ಧಿಯೇ ಬದಲಾಗಿ ಹೋಗಿತ್ತು.
ಸ್ವಕರ್ಮಾನುಷ್ಠಾನವನ್ನಾತ ಪೂರ್ತಿಯಾಗಿ ಬಿಟ್ಟುಬಿಟ್ಟಿದ್ದ. ತಾನೇ ದೇವರೆಂಬ ಭಾವ ಆತನ
ಬಗೆಯಲ್ಲಿ ಬಲವಾಗಿ ಬೇರೂರಿತ್ತು. ಮುನಿಗಳು ಗೈಯುತ್ತಿದ್ದ ಯಜ್ಞಾದ್ಯನುಷ್ಠಾನಗಳನ್ನು
ನಿಲ್ಲಿಸಿದ. ದೇವಾಲಯಗಳಲ್ಲಿ ಜಾತ್ರೆ ಅಭಿಷೇಕ ಪೂಜೆ ಉತ್ಸವಾದಿಗಳು ನಿಂತು ಹೋದವು.
ಎಲ್ಲರೂ ಅರುಣನನ್ನೇ ದೇವರೆಂದುಪೂಜಿಸುವುದು ಅನಿವಾರ್ಯವಾಯ್ತು. ದಿನದಿಂದ ದಿನಕ್ಕೆ
ಅಸುರನ ಪಾಪದ ಕೊಡ ಅಷ್ಟಷ್ಟೇ ತುಂಬುತ್ತಿತ್ತು. ಶ್ರೀದೇವಿ ಅರುಣಾಸುರನ ಸಂಹಾರಕ್ಕೆ
ಸಜ್ಜಾದಳು.
ಒಂದು ದಿನ ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರಿಗೆ ಏಕವೀರಾದ್ರಿಯ
ವಿಶಾಲೋದ್ಯಾನದಲ್ಲಿ ವಿಹರಿಸುತ್ತಿದ್ದ ಶ್ರೀದೇವಿ ಮೋಹಿನಿಯಾಗಿ ಕಾಣಿಸಿಕೊಂಡಳು. ಮೂರು
ಲೋಕಗಳನ್ನು ಮೋಹಪಾಶದಲ್ಲಿ ಬಿಗಿದು ಕಾಮದ ಬಲೆಯಲ್ಲಿ ಕೆಡಹಬಲ್ಲ ಮನು ಮುನಿಗಳನ್ನೂ ಮೋಡಿ
ಮಾಡಬಲ್ಲ ದಿವ್ಯಾದ್ಭುತ ರೂಪವನ್ನು ಕಂಡು ಕಂಗೆಟ್ಟು ಆಕೆ ಪರಾಶಕ್ತಿ ಎಂಬುದನ್ನು
ತಿಳಿಯಲಾಗದೇ ಅಸುರೇಶ್ವರನಾದಅರುಣನ ಅಂತಃಪುರಕ್ಕೆ ಧಾವಿಸಿ ಬಂದು ಏದುಸಿರು ಬಿಡುತ್ತಾ
ಕೈಮುಗಿದು ನಿಂದು ಬಿನ್ನವಿಸಿದರು. “ದೊರೆಯೇ ನಮ್ಮ ಉಪವನಕ್ಕೆ ಲೋಕೋತ್ತರ
ಸುಂದರಿಯೋರ್ವಳು ಬಂದಿದ್ದಾಳೆ. ಉಪವನದ ಕ್ರೀಡಾ ಶೈಲವನ್ನೇರಿ ಕುಳಿತಿದ್ಧಾಳೆ. ಆಕೆಯ
ಚೆಲುವಿಗೆ ಮೂರು ಲೋಕದಲ್ಲೂ ಸಾಟಿಯಿಲ್ಲ. ಅವಳನ್ನು ಕಾಣದ ಕಣ್ಣು ಮಾತನಾಡಿಸದ ನಾಲಗೆ,
ಇನಿದನಿಯನ್ನು ಕೇಳದ ಕಿವಿ, ಮುಟ್ಟದ ಮೈ ವ್ಯರ್ಥವೇ ಸರಿ. ಆಕೆ ನಿಮಗೆಅನುರೂಪಳಾದ
ಹೆಣ್ಣು”.
ಅರುಣನಿಗೆ ಚಂಡ ಪ್ರಚಂಡರ ಮುಂದಿನ ಮಾತುಗಳು ಕೇಳಲೇ ಇಲ್ಲ. ಬಿರುಗಾಳಿಯಂತೆ
ಉದ್ಯಾನಕ್ಕೆ ಧಾವಿಸಿ ಬಂದ. ಶ್ರೀದೇವಿಯ ಚೆಲುವನ್ನು ಕಂಡು ಸ್ತಬ್ಧನಾಗಿ ನಿಂದ. “ಓ
ಚೆಲುವೆ ನೀನು ನನ್ನನ್ನು ವರಿಸು” ಎಂದ. “ಅಯ್ಯಾ ವರಿಸ ಬಂದವಳಲ್ಲ ಸಂಹರಿಸಬಂದವಳು
ನಾನಾರೆಂದು ಕೇಳದೇ ಆಗಲೇ ನನ್ನ ಕೈ ಹಿಡಿಯುವುದಕ್ಕೆ ಮುಂದಾದೆಯಲ್ಲ”. ಮಾಯಾಂಗನೆಯ ಈ
ಕೊಂಕಿನ ಮಾತು ಕೇಳಿ ಅರುಣಾಸುರನಮನವಳುಕಿತು. ತನ್ನ ಭಯವನ್ನು ತೋರಗೊಡದೇ ದೃಢವಾಗಿ ಹೇಳಿದ
“ಓ ಹೆಣ್ಣೇ ನೀನು ಯಾರದರೇ ನನಗೇನು? ನಾನು ತ್ರಿಭುವನ ಚಕ್ರವರ್ತಿ. ನಾನು ಬಯಸಿದ್ದು
ಭಾವಿಸಿದ್ದು ನನಗೆ ದಕ್ಕಲೇ ಬೇಕು. ಸಿಕ್ಕಲೇ ಬೇಕು. ನೀನು ನನ್ನನ್ನು ಸಂಹರಿಸುವ ಸಂಕಲ್ಪ
ಮಾಡಿದ್ದೀಯಾ. ಭಲೇ ಇದಕ್ಕಿಂತ ಹಾಸ್ಯಾಸ್ಪದವಾದುದು ಯಾವುದಿದೇ? ಕಂಕಣವಿಟ್ಟ ಕೋಮಲವಾದ
ಕೈ ಕತ್ತಿ ಹಿಡಿದರೆ ಹೇಗಿದ್ದೀತು? ಹೆಚ್ಚು ಮಾತೇಕೆ? ನನ್ನಮಾತನ್ನು ಅನುಮೋದಿಸಿ
ಅಂತಃಪುರಕ್ಕೆ ಬಾ. ನಿನ್ನನ್ನು ದಾನವ ಕುಲ ಸಾಮ್ರಾಜ್ಞಿಯನ್ನಾಗಿ ಮಾಡುತ್ತೇನೆ”.
ಅರುಣಾಸುರನ ಅಜ್ಞಾನದ ಮಣ್ಣು ತಿನ್ನುವ ಮಾತಿಗೆ ಆ ಮಿಂಚಿನ ಮಹಿಳೆ ಗಹಗಹಿಸಿ ನಕ್ಕಳು.
“ಎಲಾ ದುಷ್ಟ! ದುಷ್ಟರಾದ ಶುಂಭ ನಿಶುಂಭರನ್ನು ಸಂಹರಿಸಿದ ಚಂಡಿಕೆಯೇ ನಾನು. ಅಂದು ಕದನ
ಕಣದಿಂದ ಓಡಿ ಜೀವ ಉಳಿಸಿಕೊಂಡ ಹೇಡಿ ನೀನು. ನೀನು ಬಯಸುತ್ತಿರುವುದು ನನ್ನ ಮೈಯನ್ನಲ್ಲ
ನಿನ್ನ ಮೃತ್ಯುವನ್ನು”.
ಪರಾಶಕ್ತಿಯ ಮಾತು ಕೇಳಿ ಅರುಣನಿಗೆ ಮೈಯುರಿಯಿತು. ಕತ್ತಿಯನ್ನು ಹಿಡಿದು ಆಕೆಯನ್ನು
ಕೊಲ್ಲುವುದಕ್ಕೆ ಮುಂದಾದ ತಕ್ಷಣ ಆಕೆ ಬಂಡೆಯೊಳಗೆ ಅಡಗಿ ಅಂತರ್ಧಾನಳಾದಳು. ಎಷ್ಟು
ಹುಡುಕಿದರೂ ಎಲ್ಲಿ ಹುಡುಕಿದರೂ ಆಕೆ ಕಣ್ಣಿಗೆ ಕಾಣದಾಗಲು ನಿರಾಶನಾಗಿ ಅಂತಃಪುರಕ್ಕೆ
ಮರಳಿದ ಅಸುರನು ಚಂಡ ಪ್ರಚಂಡರ ನಾಯಕತ್ವದಲ್ಲಿ ತನ್ನ ಎಲ್ಲ ಸೇನೆಯನ್ನೂ ಆ ಹೆಣ್ಣನ್ನು
ಹುಡುಕಿ ಹಿಡಿದು ತರಲು ಉಪವನಕ್ಕೆಕಳುಹಿಸಿದ. ಶ್ರೀದೇವಿಯು ರಕ್ತೇಶ್ವರಿ ಎಂಬ
ಅಭಿಧಾನದಿಂದ ಅತಿ ಘೋರ ರೂಪವನ್ನು ತಾಳಿ ಚಂಡ ಪ್ರಚಂಡರಾದಿಯಾಗಿ ಅರುಣಾಸುರನ ಸಮಸ್ತ
ಸೇನೆಯನ್ನೂ ಸಂಹರಿಸಿ ನೆತ್ತರ ಓಕುಳಿಯನ್ನೇ ಹರಿಸಿದಳು. ಹತಾಶನಾದ ಅರುಣಾಸುರನ
ಕ್ರೋಧಕ್ಕೆ ಮೇರೆ ಇಲ್ಲವಾಯಿತು. ಪಿತ್ಥ ನೆತ್ತಿಗೆ ಹತ್ತಿತು. ತನ್ನ ದೊರೆಗಳಾದ ಶುಂಭ
ನಿಶುಂಭರ ಜೀವ ಹೀರಿದ ಈ ಹೆಮ್ಮಾರಿ ಹೆಣ್ಣನ್ನು ಕೊಂದೇ ತೀರುತ್ತೇನೆಂದು ಪ್ರತಿಜ್ಞೆಗೈದು
ಕತ್ತಿಯನ್ನುಕೈಯಲ್ಲಿ ಹಿಡಿದು ಉದ್ಯಾನದ ಅಂಗುಲ ಅಂಗುಲವನ್ನೂ ಅಲೆದು ತನ್ನನ್ನು
ಅಣಕಿಸಿದ ಅಬಲೆಯನ್ನು ಕಾಣದೇ ಈ ಹಿಂದೆ ತನ್ನೆದುರಿಗೇ ಎಲ್ಲಿ ಅಂತರ್ಧಾನವಾದಳೋ ಆ
ಬಂಡೆಗಲ್ಲಿಗೇ ಹಲವು ಬಾರಿ ಖಡ್ಗದಿಂದ ಪ್ರಹಾರ ಮಾಡಿದ.
ಕಲ್ಲೇಟು ಬಿದ್ದ ಜೇನುಗೂಡಿನ ನೊಣಗಳೆಲ್ಲ ಒಮ್ಮೆಗೇ ಮೇಲೆದ್ದು ಮುತ್ತಿಕೊಳ್ಳುವಂತೆ ಆ
ಬಂಡೆಗಲ್ಲಿಗೆ ಕತ್ತಿಯ ಏಟು ಬಿದ್ದಾಕ್ಷಣವೇ ಸಹಸ್ರಾರು ದುಂಬಿಗಳು ಶಿಲೆಯಿಂದ ಮೇಲೆದ್ದು
ಅರುಣನನ್ನು ಮುತ್ತಿ ಕೊಂಡಿಯೂರಿ ಹೀರತೊಡಗಿದವು. ಬ್ರಹ್ಮನ ವರಬಲವಿದ್ದ ಕಾರಣ ಈ
ಅರುಣಾಸುರನು ಶಸ್ತ್ರಾಸ್ತ್ರಗಳಿಂದಲೂ ದ್ವಿಪಾತ್ ಚತುಷ್ಪಾತ್ ಪ್ರಾಣಿಗಳಿಂದಲೂ ದೇವದಾನವ
ಮಾನವ ವರ್ಗದಿಂದಲೂಸಾವಿಗೀಡಾಗುವುದಿಲ್ಲವೆಂಬ ವಿಚಾರವನ್ನರಿತ ಅಂಬಿಕೆ ಆರು ಕಾಲಿನ ಉಗ್ರ
ಭ್ರಾಮರಿಯ ರೂಪವನ್ನು ತಾಳಿ ವಜ್ರದ ಕೊಂಡಿಯಿಂದ ಅಸುರನ ಎದೆ ಬಗೆದು ಅಸುವನ್ನು ಹೀರಿ
ಅರುಣಾಸುರನ ಉಪಟಳದಿಂದ ಲೋಕವನ್ನು ಮುಕ್ತಗೊಳಿಸಿದಳು. ಇವೆಲ್ಲವನ್ನೂ ಒಳಗಣ್ಣಿನಿಂದ ಕಂಡ
ಮುನಿ ಜಾಬಾಲಿ ತನ್ನ ಶಿಷ್ಯ ಪ್ರಶಿಷ್ಯ ಸಮೂಹದೊಂದಿಗೆ ನಿರ್ಜರಾರಣ್ಯದ ತನ್ನ ಆಶ್ರಮದಿಂದ
ಓಡೋಡಿ ಬಂದು ಶ್ರೀದೇವಿಯನ್ನು ಬಹು ಬಗೆಯಿಂದಸ್ತುತಿಸಿ ಸೌಮ್ಯ ರೂಪವನ್ನು ಧರಿಸಿ
ಭೂಲೋಕದಲ್ಲಿ ನೆಲೆನಿಂತು ಭಕ್ತರನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದ. ಅಸುರ
ಸಂಹಾರದಿಂದ ಸ್ವತಂತ್ರರಾದ ಸಮಸ್ತ ದೇವತೆಗಳು ಉಗ್ರ ಭ್ರಾಮರಿಯ ದಿವ್ಯ ಸನ್ನಿಧಾನದಲ್ಲಿ
ನೆರೆದು ಸ್ತುತಿಸಿ ಜಯಕಾರವನ್ನು ಹೇಳಿದರು. ಜಾಬಾಲಿಯ ಆದೇಶದಂತೆ ದೇವೇಂದ್ರನು
ಸ್ವರ್ಗಲೋಕದಿಂದ ಕಲ್ಪವೃಕ್ಷದ ದಿವ್ಯ ನಾರಿಕೇಲ ಜಲವನ್ನು ತಂದು ದೇವತೆಗಳೊಂದಿಗೆ ಸೇರಿ
ಉಗ್ರ ಭ್ರಾಮರಿಗೆ ಅಭಿಷೇಕಮಾಡಿ ಶಾಂತಗೊಳಿಸಿದ. ಅಲ್ಲೇ ಸನಿಹದಲ್ಲಿ ಹೊಳೆಯಾಗಿ
ಹರಿಯುತ್ತಿದ್ದ ಕಾಮಧೇನು ಪುತ್ರಿಯಾದ ನಂದಿನಿಯು ದೇಹವನ್ನು ಧರಿಸಿ ಶ್ರೀದೇವಿಯ ಮುಂದೆ
ಬಂದು ಕೈಮುಗಿದು ನಿಂದು ಮುನಿ ಶಾಪದಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಬೇಡಿಕೊಂಡಳು.
ಪ್ರಸನ್ನಳೂ ಶಾಂತಳೂ ಆದ ಶ್ರೀದೇವಿ ತನ್ನ ಉಗ್ರ ರೂಪವನ್ನು ತ್ಯಜಿಸಿ ಅಭಯವನ್ನಿತ್ತಳು.
ಇಂದ್ರಾದಿಗಳೇ, ಜಾಬಾಲಿಯ ಪ್ರಾರ್ಥನೆಯಂತೆ ನಾನು ಇಲ್ಲಿ ನೆಲೆ ನಿಂತುಭಕ್ತರನ್ನು
ಅನುಗ್ರಹಿಸುತ್ತೇನೆ. ಅರುಣಾಸುರ ಸತ್ತ ಈ ಸ್ಥಳವು ಅಶುಚಿಯಾದ ಕಾರಣ ಇಲ್ಲೇ ಸನಿಹದಲ್ಲಿ
ಹರಿಯುತ್ತಿರುವ ನಂದಿನೀ ನದಿಯ ಮಧ್ಯ ಭಾಗದಲ್ಲಿ ನಾನು ಲಿಂಗರೂಪದಿಂದ ಉದ್ಭವಿಸುತ್ತೇನೆ. ಈ
ಮೊದಲೇ ನಾನು ವರವಿತ್ತಂತೆ ನಂದಿನಿ ಶಾಪಮುಕ್ತಳಾಗುತ್ತಾಳೆ. ಜಾಬಾಲಿಯ ತಪಃ ಫಲವಾಗಿ
ನಾನು ದಿವ್ಯ ಸನ್ನಿಧಾನವನ್ನು ನಂದಿನೀ ನದಿಯ ನಡುವೆ ಮೂಡಿ ಬಂದ ಲಿಂಗದಲ್ಲಿ
ನೆಲೆಗೊಳಿಸುತ್ತೇನೆ. ನಂದಿನಿಯ ಕಟಿಭಾಗದಿಂದ ನಾನು ಮಾಡಿದ ಕಾರಣ ಕ್ಷೇತ್ರವು “ಕಟೀಲು”
ಎಂಬ ನಾಮದಿಂದ ಸುಪ್ರಸಿದ್ಧವಾಗುವುದು.
ಈ ಆದಿ ಪರಾಶಕ್ತಿಯು ತಾನಿತ್ತ ಅಭಯ ವಚನದಂತೆ ನಂದಿನೀ ನದಿಯ ಕಟಿಭಾಗದಲ್ಲಿ ಹೊಳೆಯ
ನಡುವೆ ಲಿಂಗ ರೂಪದಿಂದ ಉದ್ಭವಿಸಿದಳು. ನಂದಿನಿಗೆ ಶಾಪ ವಿಮೋಚನೆಯಾಯಿತು. ಒಂದಾಗಿ
ಹರಿಯುತ್ತಿದ್ದ ನಂದಿನೀ ನದಿಯು ಶ್ರೀ ದೇವಿ ಲಿಂಗ ರೂಪದಲ್ಲಿ ಅವಿರ್ಭವಿಸಿದ ಸ್ಥಳದಲ್ಲಿ
ಕವಲಾಗಿ ಒಡೆದು ದಿವ್ಯ ಲಿಂಗವನ್ನು ಬಳಸಿ ಬಳಿಕ ಮುಂದೆ ಒಂದಾಗಿ ಹರಿದು ಪಡುಗಡಲ
ತಡಿಯನ್ನು ಸೇರುತ್ತದೆ.ಅಂದಿನಿಂದ ಈ ಪುಣ್ಯಕ್ಷೇತ್ರವು ಶ್ರೀದೇವಿಯು ನಂದಿನಿಯ ಕಟಿ
ಭಾಗದಲ್ಲಿ ಅವಿರ್ಭವಿಸಿ ಈ ಇಳೆಯಲ್ಲಿ ಪ್ರಸಿದ್ಧಳಾದ ಕಾರಣ ಈ ಕ್ಷೇತ್ರವು “ಕಟೀಲು” ಎಂದೇ
ಪ್ರಸಿದ್ಧಿಯಾಯಿತು. ಸಂಪಿಗೆಯ ಕಂಪು ದುಂಬಿಗೆ ಹಿತವಲ್ಲದ ಕಾರಣ ಭ್ರಾಮರಿಯ
ಸಾನಿಧ್ಯದಲ್ಲಿ ಸಂಪಿಗೆಯ ಹೂವನ್ನು ಪೂಜೆಗೆ ಬಳಸುವುದಿಲ್ಲ. ಎಳನೀರು ಶ್ರೀದೇವಿಗೆ ಅತಿ
ಪ್ರಿಯವಾದ ಕಾರಣ ಇಲ್ಲಿ ಯಾರೂ ದೇವರಿಗೆ ಒಪ್ಪಿಸದೇ ಎಳನೀರನ್ನು
ಕುಡಿಯುವುದಿಲ್ಲ.ಎಳನೀರಿನ ಅಭಿಷೇಕವಂತೂ ದೇವಿಗೆ ಅತ್ಯಂತ ಮೆಚ್ಚಿನದು. ಶ್ರೀ ದೇವಿಯು
ಅಸುರನ ಸಂಹಾರಕ್ಕಾಗಿ ನಂದನದಲ್ಲಿ ನಿರತನಲಿವ ತ್ರಿಲೋಕಮೋಹಿನಿಯಾಗಿ ಕಾಣಿಸಿಕೊಂಡ ಕಾರಣ
ಯಕ್ಷಗಾನ ನರ್ತನವೆಂಬುದು ಶ್ರೀದೇವಿಗೆ ಬಹು ಪ್ರಿಯವಾದುದು. ಭಗವತಿಗೆ ಬಯಲಾಟದ
ಸೇವೆಯಿತ್ತು ತಮ್ಮ ಬಾಳಿನ ಬಂಗಭವಣೆಗಳನ್ನು ಕಳೆದುಕೊಂಡ ಭಕ್ತವೃಂದ ಅನೇಕ ಅನನ್ತ.
ಪ್ರತಿನಿತ್ಯ ಶ್ರೀದೇವಿಗೆ ಸಲ್ಲುವ ರಂಗಪೂಜೆ ಹಾಗೂಹೂವಿನಪೂಜೆಗಳು ವಿಶೇಷವಾದವು.
ಆಧಾರ ಗ್ರಂಥಗಳು:
ಮಾರ್ಕಂಡೇಯ ಪುರಾಣಾಂತರ್ಗತ-ದೇವಿ ಮಹಾತ್ಮೆ (ಸಪ್ತಶತೀ)
ದೇವೀ ಭಾಗವತ
ಸ್ಕಾಂದ ಪುರಾಣಾಂತರ್ಗತ ಸಹ್ಯಾದ್ರಿಖಂಡ
ಸೋದೆಮಠದಿಂದ ಪ್ರಕಾಶಿತ ನಿರ್ಜರಾರಣ್ಯ ಮಹಾತ್ಮ್ಯ (1927)
KSHETRA PURANAM
The first quarter of the twentyeighth recurrence of the Yuga quarter
of the Vaivaswatha manvanthara is in progress. The earth is in the grip
of an unprecedented drought. Not a drop of water in the rivers, lakes or
wells. Forests and gardens give a disolate look with plants and the
creepers withered and trees despoiled. No water to drink and no food to
eat. Animals, birds and men look starved and emaciated. The earth is
looking a veritable morgue what with heaps of corpses littering the
earth everywhere. All round can be heard the groan of dying beings.
Inside a cave in a sequestered lush green forest close by the Amalaka
Theertha (the lake of the emblic tree) sage Jabali was in deep
meditation, absorbed in him. As if by a divine will be was woken up.
Come out of himself he opened his eyes on the thristing and starving
million. It was too much of an agony for that kindly soul to look on and
do nothing about. He resolved to erradicate the drought with a Yajna.
But how to perform a Yajna in a land of acute water famine? A
sacrifice which requires many materials and accessories to perform it?
How to gather the required materials? The sage thought a moment. Then by
his yogic powers he ascended in his body of light to heaven and laid at
the feet of Indra, the performer of a hundred sacrifices, the earth’s
tale of suffering and pleaded: “Lord, I have resolved to perform a
sacrifice for the welfare of the earth and to erradicate the drought now
ravaging it. Be kind enough to send the divine cow Kamadhenu to be the
source of provision for the sacrifice. But for her I don’t see the
sacrifice materializing in the waste land the earth now is”.
“Oh sage, Kamadhenu has gone to Varunaloka for a sacrifice I am
helpless. I can’t send her with you now. But her daughter, Nandini is
here. She is as endowed and divinely blessed as her mother. If she is
agreeable, you may take her and consummate the sacrifice” said Indra
giving his consent.
Happy that his wish was granted sage Jabali left Indra and came to
where Nandini was. With folded hands he addressed her with these words:
“Blessed mother, the earth is in the grip of a scorching drought.
Starved stomachs are gulping the flesh of dogs and jackals: parched
tongues are licking the dropping tears. Without rain no crops is
possible, and without crop no life. Sacrificial offerings consecrated
with manthra make the gods happy and they in turn bless the word with
timely and plentiful rains, say the scriptures. As such, I have resolved
to perform a Yajna in order to get the world rid of the drought and to
ensure is welfare. But the drought-scorched earth can’t provide the
material requisites for the Yajna. You are the daughter of Kamadhenu,
the provider of all wishes. Magaminmous mother, graciously accompany me
to the earth and bless the sacrifice with the material requisites
therefor”, supplicated the sage.
Endowed by birth with the divine power to provide every wish Nandini
was filled with pride in every vein and swelled with the importance of
being in the company of gods. Her divine endowments made her feel
superior to all. Vanity overflowed from within her: insolence radiated
from her eyes. Arrogance had blinded her: impertinence had dried up the
last drop of pity in her. Unmindful that her supplicant was a great
spiritual master and a seer she retorted in utter flippancy and reckless
abandon. “Your earth is the womb that begot fallen villains like
Keechaka, Ravana amd Karthaveerya. It is the abode of evil and a den of
corruption. I will never set my foot there “So dismissed Nandini with
impunity the piteous prayer of the sage.
Jabali was deeply pained. “The blessed earth on which Lord Narayana
successively incarnated, divine souls performed miraculous deeds, great
master’s unmatched heroes moved and moved human souls and rewrote man’s
destiny, the most hallowed place in the whole creation thus shunned and
dismissed! How unfortunate I am to get to hear the land of my birth thus
condemned!” With anguish overflowing and anger overpowering him, but
somehow restraining him, the sage beseeched her once again.
“Holy mother, mire will be where lake is. Evil will be where man is.
Filth will be where human habitation is. That is investable. But men are
not the only sinners. The great gods have sinned too! And men have not
committed what they gods have not. Didn’t Indra, infatuated with Ahalya,
get cursed with eyes all over his body? Wasn’t Rama born on the same
earth Ravana stalked and revenged? Please don’t be so merciless to the
starving and suffering mankind. Relent and accompany me to the earth and
facilitate the sacrifice. Be benignant on the mortals.
But, alas, all this warmth of concern and heat of distress could not
melt the hardened heart of Nandini. Without batting an eye she rejoined,
“Sage, don’t press me further in vain. Let Lord Shiva himself come and
enjoin, I won’t budge an inch from here to get down to that abode of
sinners of yours. Let them suffer the retribution for their sins.”
Though master of himself Jabali lost his restraint. He had reached
the end of his endurance. Softer than a flower, his heart becomes stone.
From top to toe he flamed with wild rage. His blistering tongue shot
out words of curse:” You have condemned the earth, the holy land of
redeeming rivers like the Ganga. Let you be a river too flowing on the
very same earth”.
The curse struck Nandini like a bolt from the blue. Whatever had
happened and all in a trice and unawares! Shattered she collapsed at the
sage’s feet. Her penitent tears washed them. She begged him to relent,
“Enlightened father, mercy. Forgive this ignorant and proud creature her
sin. Mercifully withdraw the curse; prescribe the remedy”.
Jabali by nature was a kindly soul. Even his disciples in the ashram
had never received a harsh word from him. Presently he relented and took
pity on the wretched creature. But it was too late. The curse had been
uttered. Now there was no taking it back. It could not be. How to repair
the split milk? “If it were not so willed by Providence”, he thought,
“How could my disciplined and restrained mind be so overpowered by
anger?” Consoling her sage said, “Nandini, my child do not grieve.
Flowing as a river is preferable to being born tree, a beast, a bird or a
man. It seems to be the will of the supreme Mother, Shakthi. Or else
this tongue of mine would not blurt out these cursed words of a curse.
To redeem you now from the cruse with a counter- curse to neutralize it
is beyond me. Get yourself presently to “Kanakachala” on earth and there
undertake penance meditating on the supreme Mother. She will bless you
with the way out of this course.” So saying Jabali blessed Nandini and
returned with a heavy heart to his hermitage in the lonely lush
wildness.
Nandini bade farewell to Indra and left heaven. Turning the words of
the sage over in her mind she reached Kanakachala and started her
penance. She meditated hard on the omnipotent Mother. Many years passed.
One auspicious day the Mother, ever beloved of her devotees, appeared
before her and said, “Nanidni my child, here I am, pleased with your
austerity and internal worship. I will grant you your wish. Ask” Nandini
was beside herself with joy. “Mother of the universe, kindly frees me
from the curse of sage Jabali”, she prayed. The Mother said calmly but
firmly. “Nandini, the words of great sages are not a mere cluster of
letters. They have the force of a manthra. They can never be falsified
or nullified. You have but to flow as a river”. At this Nandini was
perplexed. She pleaded piteously, “Mother is all my worship over these
many years in vain? Should I remain here on earth a river for ever? Have
I no redemption?” The harrowing wail of Nandini prompted the Mother to
prescribe the remedy. “Nandini, all is not lost. Let you flow as a river
from the foot of this Kanaka Mountain at the dawn of the Magha fullmoon
day. Let you drench and fertilize the drought – scorched earth and join
the west sea. Some day I will appear in the form of a phallur girdled
by your streem”, promised mother and assured Nanidni. “That will be the
day of your redemption from the sin. Do not grieve.
Feeling relieved and sensing that the day of her redemption was not
far Nandini carried out her instructions. She started flowing from the
foot of Kanakachala and glided in the direction of Jabali hermitage in
the lonely dense forest. The sage was returning to his hermitage after
his early morning dip in the Amalaka Lake. Nandini washed his holy feet
in her nascent stream on her way to the west sea. Jabali with his inward
eye immediately knew that touch and raised both his arms in a
wholehearted gesture of benediction. Blessed was Nandini and blessed was
that fullmoon day of Magha that witnessed Nandini swallowing up in the
immensity of her belly the very flames of drought that had swallowed up
the earth and men casting a longing eye over food and water after a long
time.
Once upon a time there were two demon brothers called Shumbha and
Nishumbha. They had struck terror into the gods and established their
dominanace over the three worlds. Their prime minister was Arunasura.
When Goddess Sri Devi slayed Shumbha and Nishubha this demon had somehow
managed to go underground and slip into the netherworlds. There, by
virtue of penance, he had attained longevity and built his capital city
of Ekaveeradri. Waiting for the arrival of Kaliyuga he was at the time
dreaming of establishing a demon empire impregnable and invincible.
Chanda and prachanda were his two ministers.
Once the Rakshasa chieftains counseled him, “Lord, to build a strong
Danava empire and make it unassailable and everlasting needs martiial
power, man power, money power material power and brain power. But they
are not enough by themselves. Most of all it requires divine grace. And
that is attainable only by penance. As such it is best for you to
gratify the Creator, the Supreme Lord Hiranyagarbha and have matchless
boons granted. Thus making yourself invincible you may then proceed to
conquer Swarga and the other lokas”. Arunasura found the suggestion best
for him to carry out. He straight went to the impenetrable Amaravana
and undertook a most severe penance which lasted a great many years. At
first he ate only once a day. Then he made do with water along and
finally gave up that too. Totally fasting he meditated fiercer and
fiercer standing on one leg. Flames emanating from him heated the
heavens. The sun shuddered and sweated; the underworld scoreched red;
the seas boiled; the gods recoiled and despaired. The people of the
three worlds were terrified. Hiranyagarbha Brahma had no choice but to
appear before this fierce propitiator of his. And he did appear in the
company of Saraswathi and said,” Aruna, I am pleased with you. Ask your
wish”.
“Oh, four- headed father, if you truly pleased with me grant me immortality”, pleaded Aruna.
Brahma flashed a soft smile and said at length, “Aruna, there is a
law behind the operation of this universe. That is called Ritha, the
immutable Law. Not even gods can violate it; they shall not. You too
shall not aspire to immortality which is possible and unrealizable for
mortals. You shall not ask it and I may not give it. It is death that
makes this world appear ever new. The born is sure to die. Every visible
object with its form and name must meet its inevitable end. That being
the case you may ask for anything But deathlessness and I will grant it
but immortality, never”.
“My Lord, I knew very well that you would not grant me immortality.
There is no death to death except that Conqueror of Death, Mrithyunjaya
Lord Shiva. So, be it so. Now, grant me this wish as a substitute: let
me not meet my death by any God, demon, reptile, Yaksha, Gandharva,
Kinnara, Kimpurusha, Siddha, Sadhya, and Vidhyadhara or by an Appears:
by man or by woman; by animals that move on two or four; by any weapon.
Bless me with such a boon, oh my Father, “prayed the demon jubilantly.
Prompt came the grant: ‘Amen’. That was a grant of near immortality and
by Brahma himself. Arunasura’s joy knew no bounds. In effect he had
become deathless without being granted deathlessness. But Aruna did not
stop at that. He prostrated to the Goddess of Learning who stood beside
the Creator and supplicated, “Mother, may your advent here not be
barren. Graciously bless me with a boon as a token of motherly love”.
And the mother, pleased with the prayer, initiated him to the Gayathri
manthra and alerted him, “So long as you meditate on this manthra
everyday without fail so long will Death not touch you. But the day you
fail in your austerity and in your devotion to Mother Gayathri She will
fail you. And that will be the day of your death”.
Separately blessed by Vani and Brahma the demon Aruna swelled with
importance; teemed with vanity. His invincibility got into his head.
Devoted practice of the Gayathri manthra gave him increased confidence
in him, fortified his mind, augmented his strength and heightened his
spirits. His faculties got harmonized and well settled in himself but
not his unbriddled ambition and his untamed impudence. There was no
check on his exploits, no match to his courage, no power to dam the
flood of his power. He didn’t idle away or bide his time. With a huge
army commanded by his two ministers, Chanda and Prachanda, he besieged
heaven, the very abode of gods. Gods, they could not impregnate the fort
of boons that fortified him. They were routed. Aruna did not prefer to
ascend Indra’s throne himself. He would rather have Indra rule heaven as
his subordinate and pay him timely tributes and make gifts. As such, he
heaped his dictate on the lowered head of Indra and forced him to
subjugation. Then he subjugated the earth and the underworld and thus
brought the three worlds under his solitary rule.
Arunasura’s fame spread everywhere; day by day his glory brightened
and his power heightened. And his hold over the worlds tightened. His
devoted practice of Gayathri manthra continued without a lapse. His
austerity and devotion didn’t wane a bit. Gayathri was his breath, his
food, his soul. Unprecedented and unrelenting was his dedication to the
holy manthra. No wonder that no defeat, no distress ever crossed his
way. The vanquished Gods fondly coveted his defeat which was nowhere in
sight.
Indra went with his train to Sathyaloka and laid at the feet of the
Creator the distress of gods. Pleaded Brahma his helplessness “I
bestowed the boon on him, right, but restraining him now is not within
my powers. “The entourage led by Brahma then went to the silver mountain
and related to Maheshwara their distress-story. Unable to suggest to
them a way out of their plight or do something about it himself,
Maheshwara led them to Swethadweepa and apprised Lord Narayana of the
plight of gods caused by the unassailable Arunasura. Consoling them said
Adi Narayana, “The Supreme Mother has already promised protection
assuring us that she will assure the form of a bee and slay Arunasura
when he troubled the three worlds unresisted. So let us all go to the
foot of the Meru Mountain and meditate on that supreme Power, the
primordial Mother, inhabiting in the Kadamba grove there”.
Lord Narayana followed by the entire divinity reached the Meru and
meditated on the Holy Mother. Presently she appeared before them. The
Trinity and all the divinity sang her glory with eulogies. Pleaded, the
Mother addressed them in words that both soothed them and alerted them
to the hard reality of the case, “I know what ails you. But so far as
Arunasura remains steadfast in his worship of Gayathri not even can the
God of Death touch him. Therefore let Brihaspathi, the preceptor of
gods, approach him in disguise and instruct him in atheism. That will
effectively make him dicard the worship of Gayathri. Then I will pluck
that thorn of a demon from out of the flesh of the world and ensure its
welfare”.
Brihaspathi promptly appeared as an old Brahmin in the abode where
Arunasura practiced austerities. “Who are you? What brought you here?”
queried the demon king. “I am to see the conqueror of the three worlds
and prostrate at his feet. But having come here and seen you I felt like
laughing and pitying you. Think who you are; the omnipotent provider
and protector of the three worlds! And see what you do there: chant some
unless manthra and invoke someone else and bow your head in a tame
surrender to him! What magic is this? What mesmeric stupefaction? I
don’t understand you. You are the ruler, not the ruled. Not a servant,
but master. Not a subject, but king. Not dependent on others, but master
of your own self. Hence not one who must worship, but one worthy of
worship. Lord of the worlds you bow your heed to someone else! Nothing
could be more shameful,” spoke the old Brahmin disarmingly.
Aruna could not follow the march of drift of the old man’s words. He
rejoined: “Holy Brahmin, your lustre is bright and your words poignant.
But what you say confuses me. Oh revered Brahmin, by the grace of Lord
Brahma I became the conqueror of the worlds. All my strength, resources,
adventure, accomplishment and renown is due to the Gayathri manthra
granted by Mother Sharada. To denigrate the grace of the father and gift
of the Mother is to commit suicide. The two took my name and glory even
to the bounds of the sky. How do you fault me worshipping them? Not
worshipping would be ingratitude; forgetting that which has made me what
I am today would be impertinence”.
Vachaspathi in the guise of a Brahmin listened intently to the long
and strongly logical argument of Aruna with a smile. Then he set out to
hoodwink the demon with his sophistry. “O emperor of the Asuras, your
words look good enough on their surface. But thought out a little
philosophically, you will know they prove to be without a meaning. Who
is the giver of boons? Who the receiver? Who favours whom? Who is the
benefactor? Who the benefited? What is gratitude? What ingratitude? Who
gives help without getting something in return? Strength, courage and
confidence are not things gifted by someone or by some manthra. You are
knowledgeable and wise. Don’t acts like a superstitious fool you can
never be a worshipper, a propitiator of others. You are the object of
worship of the others, the only one worth being adored by all. The world
must worshipping I din’t know what. What self-oblivion.
One shall uplift one’s own self, not dissipate and destroy it. One is
one’s own friend and one’s own foe too. None uplift another. You make
or mar your own destiny; you are your own friend philosopher and guide;
you are your own destroyer or preserver. This is the wisdom of
scriptures. Brahma’s boon to you is not a gift, not a favour. To what
austerities had you not subjected your spirit; to what rigours, your
mind; to what hardships, your body? Brahma had no way but to be
favorably disposed towards you. And he was. He bestowed on you the boon.
But then, he had got himself paid for it in your hard penance. It was
an exchange, pure and simple. He had been obliged to give what he gave.
You need not feel indebted to him for that or feel slavishly grateful.
Nobody gives thanks to the goblet because the drink was delicious. One
doesn’t worship the axe that cuts a tree or, the broom that sweeps a
floor! The resources you speak of physical, mental, spiritual and
tempoarlinere in you, not in the manthra you must worship. You remind me
of the musk-deer that knows not the fragnance issuing from its own
navel. That Sharada, wife of that Brahma gave you not a manthra, but an
illusion, a mirage! It is trap laid by gods for you; a trick to keep you
under their hold. If all that you achieved is due to the Gayathri
manthra what is your own greatness in it? What credit? Any nonentity in
the possession of a manthra can then be an Arunasura. In that case the
manthra becames all in all. And you get reduced to a passive medium, a
hollow container of the manthra. You can not be called the Lord so for
you keep wasting yourself in the worship of this manthra. Instead you
will remain an obsequies slave. Not master but a servant; not free, but
in bondage, greedily waiting for grace to fall on you from the corner of
the eyes of a master who has no grace in him. This doesn’t become you,
born to be the conqueror of the worlds but now become a mesmerised fool,
a veritable beggar”.
The pricking innuendo of this long speech of Brihaspathi had driven
the nail right in to the head of Arunasura. His dormant pride was
stirred and got into his head and pushed out reason abiding there, which
taking the opposite course went into a deep slumber. The feeling that
there was no power superior to him got strengthened in him. He praised
the intelligence of the old Brahmin and blurted out, “No more manthras
with me and no more Gods Austerities and worship given a go by.
Henceforth I am the god, the only God. All shall worship given me. This
is my command. And you are witness to it”. His job done, expediently and
incredibly well, with the blessings of the Divine Mother Brahspathi
fared the demon well overjoyed and went back to heaven. The gods were
beside themselves with joy that Arunasura had abandoned the practice of
Gayathri.
Brahaspathi had cast a spell on Arunasura. He was thoroughly changed,
his mind vitiated and corrupted. He gave up the practice of personal
rites. What rites, what practices for God himself? What is more, he
commended the sages to stop all rites, ablutions and oblations.
Festivals, worships and ceremonies stopped in the shrines. It was ruled
that all should worship Arunasura himself as God. And he was worshipped.
Day by day the measure of his sins swelled. The vessel filled and
overflowed.
Sri Devi got ready for action, the final act of the play. One day
Arunasura’s ministers, chanda and Prachanda, saw the Devi in the
sprawling pleasures garden of the capital, Ekaveeradri. It was a
tantalizing, blinding beauty the like of which they had not seen.
Overwhelmed they could not know that it was Supreme Power Herself in the
form a youthful damsel, Mesmerised they rushed into the harem of
Arunasura and reported to him gasping and with folded hands. “Lord, a
virgin of matchless beauty is to be seen in the royal garden. She has
been seen perched on the pleasure hill. She is a veritable lightning
flash. Vain is the eye that has not seen her, the tongue that has not
addressed her, the ear that has not heard her and the hand that has not
touched her. She is most suited to be your queen.
Aruna didn’t hear the next words of his ministers; perhaps even the
last. Like a hurricane he dashed into the garden, saw her and stood
rooted to the ground, “Oh beauty, marry me,” blabbed the demon as if in a
dream. “I have not come here to marry. I came to kill. Without even
knowing who I am you have already proceeded to marry me. What
impetuosity!” These teasing words of the illusory virgin caused Aruna to
lose heart. He was afraid. But without showing it he said firmly, “Oh
young woman, whoever you are I don’t care. I am the lord of the three
worlds. What I wish I have. What I desired, I must have. You are here
determined to kill me. Whatever can be more ridiculous? The bungled,
delicate hand holding a sword..! What a sight it will be! Why waste time
and words? Accept my offer and follow me to my harem. You shall be
empress of the demon race”. The magic damsel burst out laughing and
challenged him: “You devil of a demon, I am the very chandika who slayed
Shumbha and Nishumbha. And you are the one who slipped away like a
cowerd from the battle-field. You managed to save your life on that day.
Here do I come back to take my due which has long eluded my hands here,
you stand not before your desired queen, but before your destined
death”.
Aruna’s blood boiled to hear this. None had challenged him thus, much
less, humiliated. He wielded his sword and charged at her. She
disappeared into a rock. After a long, desperate search for her he
returned to his palace frustrated. He ordered his army in its full
strength and led by his two ministers to ransack every nook of the
pleasure garden for the invisible magic-virgin. Sri Devi assumed a
terrible form in the name of Raktheshwari and destroyed to the last man
the huge army of Arunasura including Chanda and Prachanda. Streams of
blood flowed unabated. Arunasura’s rage knew no bounds. He swore to
avenge the death of his masters Shumbha and Nishumbha by sucking the
life out of this devil of a woman. Sword in hand he went round the
garden not leaving an inch looking for her. Unable to find her he
stabbed and jabbed at the rock she had disappeared into.
Lo! Swarmed out of the rock myriad bees attacked Aruna. They dipped
their stings into his flesh and sucked his blood. Sri Devi herself
alighted right on the demon’s chest and pierced his heart with a sting
strong as diamond and sucked the life from out of it. The six- footed
bee is neither two-legged nor four-legged; and the bee is neither god,
nor demon, nor man and the sting of a bee is no weapon of any kind. The
Mother, thus, rid the world of a terror that was Arunasura without
violating the terms and implications of the boon of Brahma.
Sage Jabali saw all this with his inner eye. He came running from his
hermitage in the lush forest with his numerous disciples to where the
Mother was and propitiated her with eulogies. He pleaded with her to
assume a milder form and stay on earth permanently.
The gods, now free from fear, gathered in the holy presence of the
Mother and sang the praise of Her glory. On instructions from Jabali
Indra brought from heaven a great quantity of tender coconut yielded by
Kalpavraksha and performed along with the other gods the holy shower for
the terrible bee in order to pacify it. Nandini, the daughter of
Kamadhenu, who was flowing nearby as a river assumed her original bodily
form and prayed the Devi with folded hands to redeem her from the
sage’s curse. Pacified and pleased the Devi graciously withdrew her
terrible form and assured them protection. “My beloved one I grant
Jabali’s prayer and will make this place my abode and bless my devotees.
But this spot is not fit for me to abide in, defiled as it has been by
the death of Arunasura. As such, I will incarnate as a Linga in the
middle of Nandini flowing as a stream near here. As per the boon I have
already granted her she will be freed from her Curse. Great is the
efficacy of the penance of Jabali which will see me repose my divine
presence in the Linga that emerged from the middle of the river Nandini.
I will make of her forked stream my girdle”, promised the Supreme
Mother.
As promised the Mother incarnated in the form of a linga in the
middle of the stream of Nandini. And Nandini was redeemed from her
curse. The single stream devided into two where Sri Devi emerged as a
linga. After skirting the linga, the streams reunite and flow as one
stream that joins the west sea. Blessed Nandini, rewarded with the
privilege of wasting for ever the Mother’s feet!
The Champaka is not liked by the bee for his strong fragrance. So the
flower is not used in this shrine of Bhramari, the female bee. The
water of tender coconut is the favorite of the Mother so none in this
shrine drinks tender coconut without first offering it to the Mother.
The abhisheka (holy shower) with tender coconut is the ultimate of the
favorites of the Mother. Because the Mother appeared as a dancing damsel
in the garden of Aruna in order to kill him She is fond of the
yakshagana dance offered by devotees as service to Her.
Book s for Reference
Markandeya Puran-Saptashathi
Skanda Purana – Sanathkumara Samhithe-Sahyadrikhanda
Devi Bhagavatha
From Sode Mutt- Shri Nirjararanya Mahatmayam (1927)