Special Programs in Shri Durgaparameshwari Temple
(ಶ್ರೀ ದೇವೀ ಸನ್ನಿಧಿಯಲ್ಲಿ ವಿಶೇಷ ಕಾರ್ಯಕ್ರಮಗಳು)

Annual Utsavam of Shri Durgaparameshwari
(ಶ್ರೀ ದೇವೀ ಸನ್ನಿಧಿಯಲ್ಲಿ ವರ್ಷಾವಧಿ ಉತ್ಸವ)

ಕಟೀಲು ದೇಗುಲ ಮೂಲಸ್ಥಾನ ಕುದ್ರು ಜೀರ್ಣೋದ್ಧಾರಕ್ಕೆ ಚಾಲನೆ

ಕಟೀಲು ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೂಲಸ್ಥಾನ ಕುದ್ರುವಿನ ಜೀರ್ಣೋದ್ಧಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಾಮಗಾರಿಯ ಚಾಲನೆ ಸಂದರ್ಭ ಶ್ರೀದೇವಳದ ತಂತ್ರಿಗಳಾದ ಹಯಗ್ರೀವ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರುಗಳಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸಂಸದರಾದ ನಳಿನ್‌ಕುಮಾರ್‌ ಕಟೀಲ್‌, ದಾನಿಗಳಾದ ಸತೀಶ್‌ ಶೆಟ್ಟಿ ಪಡುಬಿದ್ರೆ, ವಾಸ್ತುಶಾಸ್ತ್ರ ಪರಿಣತರಾದ ಸುಬ್ರಹ್ಮಣ್ಯ ಭಟ್‌, ಶಿಲ್ಪಿ ವಿಷ್ಣುಮೂರ್ತಿ ಭಟ್‌ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರಕ್ಕೆ ಮಾನ್ಯ ಮುಖ್ಯಮ೦ತ್ರಿಗಳ ಭೇಟಿ

ದಿನಾ೦ಕ 26.12.2011ರ೦ದು ಬೆಳಿಗ್ಗೆ ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನಕ್ಕೆ ಸನ್ಮಾನ್ಯ ಮುಖ್ಯಮ೦ತ್ರಿ ಶ್ರೀ ಸದಾನ೦ದ ಗೌಡ ಇವರು ಭೇಟಿಯಿತ್ತು ಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.

ಶ್ರೀ ಕ್ಷೇತ್ರಕ್ಕೆ ಬೆ೦ಗಳೂರು ನಗರ ಪೋಲಿಸು ಆಯುಕ್ತರ ಭೇಟಿ

ಬೆ೦ಗಳೂರು ನಗರ ಪೋಲಿಸು ಆಯುಕ್ತರಾದ ಶ್ರೀ ಜ್ಯೋತಿಪ್ರಕಾಶ್ ಮಿರ್ಜಿ ಇವರು ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಠಾನಕ್ಕೆ ದಿನಾ೦ಕ 27.12.2011ರ೦ದು ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

ಕುಕ್ಕೆ ಮಾದರಿಯಲ್ಲಿ ಕಟೀಲು ಅಭಿವೃದ್ಧಿ: ಮುಖ್ಯಮಂತ್ರಿ ಶ್ರೀ ಡಿ. ವಿ ಸದಾನಂದ ಗೌಡ

ಶ್ರೀ ಡಿ.ವಿ.ಸದಾನಂದ ಗೌಡರವರು ಭಾನುವಾರ ದಿನಾಂಕ 14-08-2011ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಪತ್ನಿ ಶ್ರೀಮತಿ ಡಾಟಿ ಸದಾನಂದ ಗೌಡ ಹಾಗೂ ಮಗನೊಂದಿಗೆ ಭೇಟಿ ನೀಡಿ,ಮಧ್ಯಾಹ್ನದ ಮಹಾ ಪೂಜೆಯಲ್ಲಿ ಪಾಲ್ಗೊಂಡು,ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು,ಶಾಸಕರು,ಸಂಸದರು, ಜಿಲ್ಲಾಧಿಕಾರಿಯವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ದೇವಳದ ಆಡಳಿತಾಧಿಕಾರಿಯವರು ದೇಗುಲಕ್ಕೆ ಭೂಸ್ವಾಧೀನ,ಒಳಚರಂಡಿ,ಮಾಸ್ಟರ್ ಪ್ಲಾನ್, ಬೈಪಾಸ್ ರಸ್ತೆ, ವಸತಿ ಗೃಹ,ಶಾಲೆ ಕಾಲೇಜುಗಳಿಗೆ ಸರಕಾರಿ ಅನುದಾನ, ದೇಗುಲ ಸುತ್ತಮುತ್ತ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣದ ಅಗತ್ಯತೆಗಳ ಕುರಿತು ಅನುದಾನ ಒದಗಿಸಬೇಕೆಂದು ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಶೀಘ್ರ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.

ದಿನಾಂಕ 28.7.2011 ರಂದು ಜರಗಿದ ಕಟೀಲು ದೇವಳದ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ

ಇಲ್ಲಿನ ಪುರಾಣ ಪ್ರಸಿದ್ಧ ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಸಂಸದ ಶ್ರೀ ನಳಿನ್ ಕುಮಾರ್, ಶಾಸಕ ಶ್ರೀ ಅಭಯಚಂದ್ರ, ಆಡಳಿತಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಆನುವಂಶಿಕ ಮೊಕ್ತೇಸರ ಶ್ರೀ ವಾಸುದೇವ ಆಸ್ರಣ್ಣ, ಪ್ರಬಂಧಕ ಶ್ರೀ ವಿಶ್ವೇಶ್ ರಾವ್, ಧಾರ್ಮಿಕ ದತ್ತಿ ಇಲಾಖೆಯ ತಹಶಿಲ್ದಾರ್ ಶ್ರೀ ಎ.ಆರ್. ಪ್ರಭಾಕರ್, ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀ ರಾಜೇಂದ್ರ ಕಲ್ಬಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು. ಕಳೆದ ಫೆಬ್ರವರಿಯಲ್ಲಿ ದೇಗುಲಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಶ್ರೀ ನಂದಕುಮಾರ್ ಸೂಚಿಸಿರುವ ಕಾರ್ಯಗಳ ಬಗ್ಗೆ ಪ್ರಮುಖ ಚರ್ಚೆ ನಡೆಯಿತು. ದೇಗುಲದ ಒಳಗೆ ಶುಚಿತ್ವ, ಏರ್‌ಕೂಲರ್ ಅಳವಡಿಕೆ, ಉಗ್ರಾಣದಲ್ಲಿರುವ ಹಳೆಯ ಸ್ಟೀಮ್ ಬಾಯ್ಲರ್‌ಗಳ ರಿಪೇರಿ, ಭೋಜನ ಶಾಲೆಯಲ್ಲಿ ಹೆಚ್ಚು ಮಂದಿಗೆ ಅವಕಾಶ ಇರುವಂತೆ ಬದಲಾವಣೆ ಕಾರ್ಯ, ನದಿಯ ನೀರಿನಿಂದ ದೇಗುಲಕ್ಕೆ ವಿದ್ಯುತ್ ತಯಾರಿ, ಬಾಡಿಗೆ ಅಂಗಡಿದಾರರನ್ನು ಬಸ್‌ನಿಲ್ದಾಣದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದು, ಪ್ರವಾಸೋದ್ಯಮ ಇಲಾಖೆಯಿಂದ ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಗೋಶಾಲೆಯ ದುರಸ್ತಿ ಹೀಗೆ ಮೂವತ್ತೈದಕ್ಕೂ ಹೆಚ್ಚು ವಿಚಾರಗಳು ಚರ್ಚಿತವಾದವು. ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಕೆಯಾಗುವ ಡ್ರೈನೇಜ್, ಉದ್ಯಾನವನ ಇತ್ಯಾದಿಗಳ ವಿವರವನ್ನು ಅಧಿಕಾರಿಗಳು ನೀಡಿದರು.
 

ದಿನಾಂಕ 28.7.2011 ರಂದು ನಡೆದ ಕಟೀಲು ದೇವಳದ ಪ್ರಾಥಮಿಕ ಶಾಲಾ ಒಂದನೇ ಮಹಡಿ ಕಟ್ಟಡ ಉದ್ಘಾಟನೆ

     
ಕಟೀಲು : ೯೫ ವರ್ಷಗಳ ಇತಿಹಾಸದ ೩೨೪ ವಿದ್ಯಾರ್ಥಿಗಳು ಕಲಿಯುತ್ತಿರುವ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಒಂದನೇ ಮಹಡಿಯನ್ನು ಸಂಸದ ಶ್ರೀ ನಳಿನ್ ಕುಮಾರ್ ಗುರುವಾರ ಉದ್ಘಾಟಿಸಿದರು. ತನ್ನ ಸಂಸದರ ಅನುದಾನದಿಂದ ರೂ.೪ ಲಕ್ಷವನ್ನು ಶಾಲೆಯ ಎದುರಿನ ಇಂಟರ್‌ಲಾಕ್ ಕಾಮಗಾರಿಗೆ ನೀಡುವುದಾಗಿ ತಿಳಿಸಿದ ಶ್ರೀ ನಳಿನ್ ಕುಮಾರ್ ಕನ್ನಡ ಶಾಲೆಗಳಲ್ಲಿ ವ್ಯವಸ್ಥೆಗಳು ಚೆನ್ನಾದಾಗ ವಿದ್ಯಾರ್ಥಿಗಳನ್ನು ಸೆಳೆಯಲು ಸಾಧ್ಯವೆಂದರು. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಮಾತನಾಡಿ, ಕಟೀಲು ದೇಗುಲದಿಂದಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪ್ರವಾಸದ ವ್ಯವಸ್ಥೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಕರಾವಳಿಯಲ್ಲಿ ಉಚಿತ ಊಟ, ಶಿಕ್ಷಣ ನೀಡುವ ವ್ಯವಸ್ಥೆ ಇರುವುದು ಕಟೀಲಿನಲ್ಲಿ ಮಾತ್ರ ಎಂದು ಶಾಸಕ ಶ್ರೀ ಅಭಯಚಂದ್ರ ಹೇಳಿದರು. ಕಟೀಲಿನ ಆನುವಂಶಿಕ ಮೊಕ್ತೇಸರ ಶ್ರೀ ವಾಸುದೇವ ಆಸ್ರಣ್ಣ, ದೇಗುಲದ ಆಡಳಿತಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ.ಸದಸ್ಯ ಶ್ರೀ ಈಶ್ವರ, ತಾ.ಪಂ.ಸದಸ್ಯೆ ಶ್ರೀಮತಿ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಶ್ರೀ ಜನಾರ್ದನ ಕಿಲೆಂಜೂರು, ದೈಹಿಕ ಶಿಕ್ಷಣದ ಶ್ರೀ ಎನ್.ಎಸ್.ಅಂಗಡಿ ಮತ್ತಿತರರಿದ್ದರು. ಪ್ರಸ್ತಾವನೆಗೈದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಸುಮಾರು ರೂ. ೧೮ ಲಕ್ಷ ವೆಚ್ಚದಲ್ಲಿ ಶಾಲೆಗೆ ಸಭಾಭವನ ನಿರ್ಮಿಸಲಾಗುವುದು ಎಂದರು. ಮುಖ್ಯ ಶಿಕ್ಷಕಿ ಶ್ರೀಮತಿ ವೈ.ಮಾಲತಿ ಸ್ವಾಗತಿಸಿದರು. ಅಧ್ಯಾಪಕ ಶ್ರೀ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗೋಪಾಲ್ ವಂದಿಸಿದರು.